➤ ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಗೋಲಾ ಗೋಕರ್ಣನಾಥ್‌ನಲ್ಲಿ ಬಲರಾಮ್‌ಪುರ್ ಚೀನಿ ಮಿಲ್ಸ್ ವತಿಯಿಂದ ₹3,080 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ, ಕಬ್ಬಿನಿಂದ ಪರಿಸರ ಸ್ನೇಹಿ 'ಪೋಲಿಲ್ಯಾಕ್ಟಿಕ್ ಆಸಿಡ್ (PLA)' ಉತ್ಪಾದಿಸುವ ಭಾರತದ ಮೊದಲ ಬೃಹತ್ ಬಯೋ-ಪಾಲಿಮರ್ ಪ್ಲಾಂಟ್ 2026ರ ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
➤ ಬಯೋ-ಪಾಲಿಮರ್: ಸಸ್ಯಗಳ ತ್ಯಾಜ್ಯ, ಜೋಳದ ಪಿಷ್ಟ ಅಥವಾ ಕಬ್ಬಿನಂತಹ ನವೀಕರಿಸಬಹುದಾದ ಜೈವಿಕ ಮೂಲಗಳಿಂದ (Renewable Biological Feedstock) ತಯಾರಿಸಲಾಗುವ ಪಾಲಿಮರ್‌ಗಳನ್ನು ಬಯೋ-ಪಾಲಿಮರ್‌ಗಳು ಎನ್ನಲಾಗುತ್ತದೆ. ಇವು ಸಾಂಪ್ರದಾಯಿಕ ಪೆಟ್ರೋಕೆಮಿಕಲ್ ಪ್ಲಾಸ್ಟಿಕ್‌ಗೆ ಉತ್ತಮ ಪರ್ಯಾಯವಾಗಿವೆ.
➤ ಪೋಲಿಲ್ಯಾಕ್ಟಿಕ್ ಆಸಿಡ್ (PLA):
- ಕಬ್ಬು ಅಥವಾ ಜೋಳದ ಸಕ್ಕರೆಯನ್ನು ಹುದುಗಿಸುವಿಕೆಗೆ (Fermentation) ಒಳಪಡಿಸಿ 'ಲ್ಯಾಕ್ಟಿಕ್ ಆಸಿಡ್' ಉತ್ಪಾದಿಸಲಾಗುತ್ತದೆ. ನಂತರ ಅದನ್ನು Polylactic Acid (PLA) ಎಂಬ ಜೈವಿಕವಾಗಿ ವಿಘಟನೀಯ (Biodegradable) ಥರ್ಮೋಪ್ಲಾಸ್ಟಿಕ್ ಆಗಿ ಪರಿವರ್ತಿಸಲಾಗುತ್ತದೆ.
- ಈ ಪ್ಲಾಂಟ್‌ನಲ್ಲಿ ಕಬ್ಬಿನಿಂದ ನೇರವಾಗಿ ಬಯೋ-ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
- ವಿಶೇಷತೆ: ಇದರಿಂದ ತಯಾರಾಗುವ ಪ್ಲೇಟ್‌ಗಳು, ಕಪ್‌ಗಳು ಹಾಗೂ ಕ್ಯಾರಿ ಬ್ಯಾಗ್‌ಗಳು ಬಳಕೆಯ ನಂತರ ಪರಿಸರದಲ್ಲಿ 3 ರಿಂದ 6 ತಿಂಗಳ ಅವಧಿಯಲ್ಲಿ ನೈಸರ್ಗಿಕವಾಗಿ ಕರಗಿ ವಿಘಟನೆಯಾಗುತ್ತವೆ (Compostable).
➤ ಪ್ರಮುಖ ತಾಂತ್ರಿಕ ಹಾಗೂ ಪರಿಸರ ವೈಶಿಷ್ಟ್ಯಗಳು:
- zero Liquid Discharge (ZLD) ತಂತ್ರಜ್ಞಾನ: ಈ ಕೈಗಾರಿಕಾ ಆವರಣದಲ್ಲಿ ಝೀರೋ ಲಿಕ್ವಿಡ್ ಡಿಸ್ಚಾರ್ಜ್ (ZLD) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಪ್ರಕಾರ, ಕಾರ್ಖಾನೆಯಿಂದ ಯಾವುದೇ ದ್ರವ ತ್ಯಾಜ್ಯವು ಹೊರಗಿನ ಜಲಮೂಲಗಳಿಗೆ ಅಥವಾ ಪರಿಸರಕ್ಕೆ ಹರಿಯುವುದಿಲ್ಲ. ತ್ಯಾಜ್ಯನೀರನ್ನು ಸಂಪೂರ್ಣವಾಗಿ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತದೆ.
- ಕೃಷಿ ಆಧಾರಿತ ಶಕ್ತಿಯುತ ಆರ್ಥಿಕತೆ: ಉತ್ತರ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯವಾಗಿದೆ. ಸಕ್ಕರೆ ಮತ್ತು ಎಥನಾಲ್ ಉತ್ಪಾದನೆಯ ಜೊತೆಗೆ ಕಬ್ಬಿನಿಂದ ಜೈವಿಕ ಪ್ಲಾಸ್ಟಿಕ್ ತಯಾರಿಸುವುದರಿಂದ ರೈತರ ಆದಾಯ ಹೆಚ್ಚುವುದಲ್ಲದೆ, ಕೃಷಿ ಆಧಾರಿತ ಬಯೋ-ಆರ್ಥಿಕತೆಗೆ (Bio-economy) ಬೆಂಬಲ ಸಿಗುತ್ತದೆ.