➤ ಭಾರತದ 'ನೈಬರ್‌ಹುಡ್ ಫಸ್ಟ್' ನೀತಿ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಭಾಗವಾಗಿ, ಗುಜರಾತ್‌ನ ಪವಿತ್ರ ದೇವನಿಮೋರಿ (Devnimori) ಬುದ್ಧನ ಅವಶೇಷಗಳನ್ನು ಶ್ರೀಲಂಕಾದ ಕೊಲಂಬೋದಲ್ಲಿರುವ ಗಂಗಾರಾಮಯ ದೇವಾಲಯದಲ್ಲಿ ಫೆಬ್ರವರಿ 5 ರಿಂದ 11, 2026 ರವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಉಪಮುಖ್ಯಮಂತ್ರಿ ಹರ್ಷ ಸಂಘವಿ ನೇತೃತ್ವದ ಭಾರತೀಯ ನಿಯೋಗವು ಈ ಐತಿಹಾಸಿಕ ಅವಶೇಷಗಳನ್ನು ಕೊಂಡೊಯ್ದಿದ್ದು, ಈ ಕ್ರಮವು ಉಭಯ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ನಾಗರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.
➤ ದೇವನಿಮೋರಿ ಅವಶೇಷಗಳ ಐತಿಹಾಸಿಕ ಮತ್ತು ಪುರಾತತ್ವ ಮಹತ್ವ:
- ಈ ಅವಶೇಷಗಳು ಗುಜರಾತ್‌ನ ಅರಾವಳಿ ಜಿಲ್ಲೆಯ ಶಾಮ್ಲಾಜಿ (Shamlaji) ಬಳಿಯ ದೇವನಿಮೋರಿ ಎಂಬ ಬೌದ್ಧ ಪುರಾತತ್ವ ತಾಣದಲ್ಲಿ ಪತ್ತೆಯಾಗಿವೆ.
- 1957-1963ರ ಅವಧಿಯಲ್ಲಿ ಪ್ರೊ. ಎಸ್.ಎನ್. ಚೌಧರಿ ಅವರ ನೇತೃತ್ವದಲ್ಲಿ ಇಲ್ಲಿ ಉತ್ಖನನ ನಡೆಸಲಾಗಿತ್ತು.
- ಬುದ್ಧನ ಶಾರೀರಿಕ ಅವಶೇಷಗಳಿದ್ದ ಈ ಪೆಟ್ಟಿಗೆಯು ಗ್ರೀನ್ ಶಿಸ್ಟ್ (Green Schist) ಕಲ್ಲಿನಿಂದ ಮಾಡಲ್ಪಟ್ಟಿದೆ.
- ಈ ಪೆಟ್ಟಿಗೆಯ ಮೇಲೆ ಬ್ರಾಹ್ಮಿ ಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ "ದಶಬಲ ಶರೀರ ನಿಲಯ" (Dashabala Sharira Nilaya) ಎಂದು ಕೆತ್ತಲಾಗಿದೆ. ಇದರರ್ಥ "ಬುದ್ಧನ ಶರೀರದ ಅವಶೇಷಗಳ ನೆಲೆ" ಎಂದಾಗಿದೆ.
- ಇದು ಕ್ರಿ.ಶ. 3 ಅಥವಾ 4ನೇ ಶತಮಾನಕ್ಕೆ (ಪಶ್ಚಿಮ ಕ್ಷತ್ರಪರ ಕಾಲ) ಸೇರಿದ್ದೆಂದು ಅಂದಾಜಿಸಲಾಗಿದೆ.
➤ ಈ ಐತಿಹಾಸಿಕ ಪ್ರದರ್ಶನವು ಭಾರತ ಮತ್ತು ಶ್ರೀಲಂಕಾ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಪುನರುಚ್ಚರಿಸುತ್ತದೆ.
ಗುರುವಾರ, 05 ಫೆಬ್ರುವರಿ 2026
1:17 ಅಪರಾಹ್ನ
Daily PDF
ಭಾರತದಿಂದ ಶ್ರೀಲಂಕಾಕ್ಕೆ ಭಗವಾನ್ ಬುದ್ಧನ ದೇವನಿಮೋರಿ ಪವಿತ್ರ ಅವಶೇಷಗಳ ಪ್ರದರ್ಶನ
Authored by:
Akshata Halli