➤ ಭಾರತವು ತನ್ನ ಕಡಲ ಸಂಶೋಧನೆ ಮತ್ತು ಸಾಗರ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯದ (Ministry of Earth Sciences) ಅಡಿಯಲ್ಲಿ ಭಾರತದ ಪ್ರಥಮ ಸ್ವದೇಶಿ ನಿರ್ಮಿತ ಸುಧಾರಿತ ಸಾಗರ ಸಂಶೋಧನಾ ನೌಕೆ ‘ಸಾಗರ ಮಂಥನ’ (ORV Sagar Manthan - Yard 3041) ಅನ್ನು ಕೊಲ್ಕತ್ತಾದ ಋಷಿ ಬಂಕಿಮ್ ಶಿಪ್‌ಯಾರ್ಡ್‌ನಲ್ಲಿ ಯಶಸ್ವಿಯಾಗಿ ಜಲಾವೃತಗೊಳಿಸಲಾಗಿದೆ (Launch). ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ನೌಕೆಯು ಭಾರತದ ಆಳ ಸಮುದ್ರ ಮಿಷನ್ (Deep Ocean Mission) ಗೆ ದೊಡ್ಡ ಶಕ್ತಿ ತುಂಬಲಿದೆ.
- ಲೋಕಾರ್ಪಣೆ ದಿನಾಂಕ: 09 ಸೆಪ್ಟೆಂಬರ್ 2026
- ಸ್ಥಳ: ಋಷಿ ಬಂಕಿಮ್ ಶಿಪ್‌ಯಾರ್ಡ್, ಕೊಲ್ಕತ್ತಾ (ಪಶ್ಚಿಮ ಬಂಗಾಳ)
- ಉದ್ಘಾಟನೆ: ಕೇಂದ್ರ ಭೂ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ (ವರ್ಚುವಲ್ ಮೂಲಕ)
- ನೌಕೆಗೆ ನಾಮಕರಣ ಮಾಡಿದವರು: ಶ್ರೀಮತಿ ಮಂಜು ಸಿಂಗ್ (ಡಾ. ಜಿತೇಂದ್ರ ಸಿಂಗ್ ಅವರ ಧರ್ಮಪತ್ನಿ)
- ನಿರ್ಮಾಣ ಸಂಸ್ಥೆ: ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE), ಕೊಲ್ಕತ್ತಾ
- ಯಾರಿಗೆ ಸೇರಿದ್ದು?: ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಆಂಡ್ ಓಷನ್ ರಿಸರ್ಚ್ (NCPOR), ಗೋವಾ
- ಒಟ್ಟು ವೆಚ್ಚ: ಸುಮಾರು ₹840 ಕೋಟಿ
- ಸೇವಾವಧಿ: 30 ವರ್ಷಗಳು
➤ 'ಸಾಗರ ಮಂಥನ' ನೌಕೆಯ ತಾಂತ್ರಿಕ ಸಾಮರ್ಥ್ಯ ಹಾಗೂ ವೈಶಿಷ್ಟ್ಯಗಳು:
- ಸ್ವದೇಶಿ ನಿರ್ಮಿತ: ಇದು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ಎಂಜಿನಿಯರಿಂಗ್ ಮಾಡಿ ನಿರ್ಮಿಸಲಾದ ಮೊದಲ ಸುಧಾರಿತ ಸಾಗರ ಸಂಶೋಧನಾ ನೌಕೆಯಾಗಿದೆ.
- ಆಳ ಸಮುದ್ರ ಸಂಶೋಧನೆ (Deep Sea Exploration): ಈ ನೌಕೆಯು ಸಮುದ್ರದ 6 ಕಿಲೋಮೀಟರ್ (6,000 ಮೀಟರ್) ಆಳದವರೆಗೆ ಮಲ್ಟಿಬೀಮ್ ಸರ್ವೇ, ಭೂಭೌತಶಾಸ್ತ್ರದ (Geophysical) ಮತ್ತು ಭೂಕಂಪನ (Seismic) ಸಮೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ.
- ತೀವ್ರ ವಾತಾವರಣದಲ್ಲೂ ಕಾರ್ಯಸಾಧ್ಯತೆ: ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮಾತ್ರವಲ್ಲದೆ ಅತ್ಯಂತ ಕಠಿಣ ವಾತಾವರಣವಿರುವ ದಕ್ಷಿಣ ಮಹಾಸಾಗರ (Southern Ocean - ಅಂಟಾರ್ಕ್ಟಿಕಾ ಪ್ರದೇಶ) ದಲ್ಲೂ ಇದು ಸಂಶೋಧನೆ ನಡೆಸಬಲ್ಲದು.
- ಸುಧಾರಿತ ತಂತ್ರಜ್ಞಾನ: ನೌಕೆಯಲ್ಲಿ ಎಯುವಿ (Autonomous Underwater Vehicles - AUVs) ಮತ್ತು ಆರ್‌ಒವಿ (Remotely Operated Vehicles - ROVs) ಗಳನ್ನು ನಿಯೋಜಿಸುವ ವ್ಯವಸ್ಥೆಯಿದೆ.
- ಆನ್-ಬೋರ್ಡ್ ಲ್ಯಾಬೋರೇಟರಿ: ವಿಜ್ಞಾನಿಗಳು ಪ್ರಯಾಣದ ಸಮಯದಲ್ಲಿಯೇ ನೌಕೆಯ ಒಳಗಿನ ಪ್ರಯೋಗಾಲಯದಲ್ಲಿ ಡೇಟಾ ಸಂಸ್ಕರಣೆ ಮತ್ತು ಸಂಶೋಧನೆ ನಡೆಸಬಹುದು.
➤ ಭಾರತವು 1983 ರಲ್ಲಿ ಜರ್ಮನಿಯಿಂದ ‘ಸಾಗರ ಕನ್ಯಾ’ (ORV Sagar Kanya) ಎಂಬ ಸಂಶೋಧನಾ ನೌಕೆಯನ್ನು ಖರೀದಿಸಿತ್ತು. ಕಳೆದ 43 ವರ್ಷಗಳಿಂದ ಭಾರತದ ಸಾಗರ ಸಂಶೋಧನೆಗೆ ಅಪಾರ ಕೊಡುಗೆ ನೀಡಿದ್ದ 'ಸಾಗರ ಕನ್ಯಾ' ನೌಕೆಯ ಸ್ಥಾನವನ್ನು ಈಗ ‘ಸಾಗರ ಮಂಥನ’ ಹಂತ-ಹಂತವಾಗಿ ಅಲಂಕರಿಸಲಿದೆ.
ಗುರುವಾರ, 10 ಸೆಪ್ಟೆಂಬರ್ 2026
7:23 ಅಪರಾಹ್ನ
Daily PDF
ಸಾಗರ ಮಂಥನ: ಭಾರತದ ಪ್ರಥಮ ದೇಶೀಯ ಸುಧಾರಿತ ಸಾಗರ ಸಂಶೋಧನಾ ನೌಕೆ ಲೋಕಾರ್ಪಣೆ!
Authored by:
Akshata Halli