➤ ವಾಷಿಂಗ್ ಟನ್: ಜಾಗತಿಕ ರಾಜತಾಂತ್ರಿಕತೆಯಲ್ಲಿ ಮಹತ್ವದ ಹೆಜ್ಜೆಯಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ 'ಶಾಂತಿ ಮಂಡಳಿ' (Board of Peace) ಮೊದಲ ಸಭೆಯಲ್ಲಿ ಭಾರತವು ವೀಕ್ಷಕ ರಾಷ್ಟ್ರವಾಗಿ (Observer Country) ಭಾಗವಹಿಸಿದೆ. ವಾಷಿಂಗ್ಟನ್‌ನಲ್ಲಿರುವ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್‌ನಲ್ಲಿ ನಡೆದ ಈ ಸಭೆಯಲ್ಲಿ, ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿಯ ಉನ್ನತ ಅಧಿಕಾರಿ ನಮಗೆ ಸಿ. ಖಂಪಾ (Namgya C Khampa) ಅವರು ಭಾರತವನ್ನು ಪ್ರತಿನಿಧಿಸಿದ್ದರು.
➤ ಶಾಂತಿ ಮಂಡಳಿ(Board of Peace): ವಿಶ್ವಸಂಸ್ಥೆಗೆ (United Nations) ಪರ್ಯಾಯ ಎಂಬಂತೆ ಬಿಂಬಿತವಾಗುತ್ತಿರುವ ಈ ಮಂಡಳಿಯನ್ನು ಕಳೆದ ತಿಂಗಳು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆರಂಭದಲ್ಲಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಯುದ್ಧಪೀಡಿತ ಪ್ರದೇಶದ ಪುನರ್ನಿರ್ಮಾಣ ಹಾಗೂ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವುದು ಇದರ ಗುರಿಯಾಗಿತ್ತು.ಪ್ರಸ್ತುತ ಈ ಮಂಡಳಿಯ ವ್ಯಾಪ್ತಿಯನ್ನು ಜಾಗತಿಕ ಶಾಂತಿ ಸ್ಥಾಪನೆಯತ್ತ ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಅಮೆರಿಕ ಹೊಂದಿದೆ.
➤ ಈ ಮಹತ್ವದ ಶಾಂತಿ ಮಂಡಳಿ ಸಭೆಯಲ್ಲಿ ಒಟ್ಟು 50ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದವು. ಇದರಲ್ಲಿ ಅಜರ್ಬೈಜಾನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಇಂಡೋನೇಷ್ಯಾ, ಇಸ್ರೇಲ್, ಜೋರ್ಡಾನ್, ಮೊರಾಕ್ಕೊ, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಟರ್ಕಿ, ಯುಎಇ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ ಸೇರಿದಂತೆ ಒಟ್ಟು 27 ದೇಶಗಳು ಮಂಡಳಿಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಾಗಿ ಪ್ರತಿನಿಧಿಸಿದ್ದವು. ಮತ್ತೊಂದೆಡೆ, ಭಾರತ ಮತ್ತು ಐರೋಪ್ಯ ಒಕ್ಕೂಟ (EU) ಸೇರಿದಂತೆ ಉಳಿದ ಪ್ರಮುಖ ದೇಶಗಳು ಈ ಪ್ರಕ್ರಿಯೆಯನ್ನು ಗಮನಿಸುವ 'ವೀಕ್ಷಕ ರಾಷ್ಟ್ರಗಳಾಗಿ' (Observer Countries) ಸಭೆಯಲ್ಲಿ ಪಾಲ್ಗೊಂಡಿದ್ದವು.
➤ ಭಾರತವು ಈ ಮಂಡಳಿಗೆ ಸೇರುವ ಬಗ್ಗೆ ಆರಂಭದಲ್ಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಫೆಬ್ರವರಿ 12ರಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು "ಅಮೆರಿಕದ ಆಹ್ವಾನವನ್ನು ಪರಿಶೀಲಿಸಲಾಗುತ್ತಿದೆ" ಎಂದು ತಿಳಿಸಿದ್ದರು.ಸಂಪೂರ್ಣ ಸದಸ್ಯತ್ವ ಪಡೆಯುವ ಬದಲಿಗೆ 'ವೀಕ್ಷಕ ರಾಷ್ಟ್ರ'ವಾಗಿ ಭಾಗವಹಿಸುವ ಮೂಲಕ ಭಾರತವು ಈ ಕೆಳಗಿನ ಸಂದೇಶಗಳನ್ನು ರವಾನಿಸಿದೆ:
- ಅಮೆರಿಕದೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳುತ್ತಲೇ, ಜಾಗತಿಕ ವಿಚಾರಗಳಲ್ಲಿ ತಟಸ್ಥ ನಿಲುವು ಪ್ರದರ್ಶಿಸುವುದು.
- ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಭಾರತವು ಬದ್ಧವಾಗಿದೆ, ಆದರೆ ಯಾವುದೇ ಹೊಸ ಸಂಘಟನೆಗೆ ಸೇರುವ ಮೊದಲು ಅದರ ಕಾರ್ಯವೈಖರಿಯನ್ನು ಗಮನಿಸಲು ಭಾರತ ಬಯಸಿದೆ.
ಶನಿವಾರ, 21 ಫೆಬ್ರುವರಿ 2026
12:53 ಅಪರಾಹ್ನ
Daily PDF
ಟ್ರಂಪ್ ಅವರ 'ಶಾಂತಿ ಮಂಡಳಿ' (Board of Peace) ಸಭೆಯಲ್ಲಿ 'ವೀಕ್ಷಕ ರಾಷ್ಟ್ರ'ವಾಗಿ ಭಾರತ ಭಾಗಿ
Authored by:
Akshata Halli