➤ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ, ಭಾರತಕ್ಕೆ ಆರ್ಥಿಕವಾಗಿ ದೊಡ್ಡ ಸಮಾಧಾನಕರ ಸುದ್ದಿಯೊಂದು ಲಭಿಸಿದೆ. ಜಾಗತಿಕ ತೈಲ ಸಾಗಣೆಯ 'ಜೀವನಾಡಿ' ಎಂದೇ ಕರೆಯಲ್ಪಡುವ ಹರ್ಮುಜ್ ಜಲಸಂಧಿ (Strait of Hormuz) ಮೂಲಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭಾರತ ಸೇರಿದಂತೆ ತನ್ನ ಐದು ಮಿತ್ರ ರಾಷ್ಟ್ರಗಳಿಗೆ ಇರಾನ್ ವಿಶೇಷ ಅನುಮತಿ ನೀಡಿದೆ.
➤ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅಗ್ನಿ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಈ ಕೆಳಗಿನ ಐದು ರಾಷ್ಟ್ರಗಳಿಗೆ ಮಾತ್ರ ಸದ್ಯಕ್ಕೆ ಈ ರಿಯಾಯಿತಿ ಅನ್ವಯಿಸಲಿದೆ:
1. ಭಾರತ
2. ಚೀನಾ
3. ರಷ್ಯಾ
4. ಇರಾಕ್
5. ಪಾಕಿಸ್ತಾನ
➤ ವಿಶ್ವದ ಒಟ್ಟು ತೈಲ ಮತ್ತು ಎಲ್‌ಎನ್‌ಜಿ ಸಾಗಣೆಯ ಸುಮಾರು 20% ರಷ್ಟು ಪೂರೈಕೆಯಾಗುವ ಹಾಗೂ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಕಿರಿದಾದ ಸಮುದ್ರ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯು ಭಾರತದ ಕಚ್ಚಾ ತೈಲ ಆಮದಿನ ಬಹುಪಾಲು ಪಾಲನ್ನು ಹೊಂದಿರುವುದರಿಂದ, ಒಂದು ವೇಳೆ ಈ ಮಾರ್ಗ ಬಂದ್ ಆದಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಭೀತಿ ಇರುತ್ತದೆ.
➤ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ: ಒಂದೆಡೆ ಮಿತ್ರ ರಾಷ್ಟ್ರಗಳಿಗೆ ಅವಕಾಶ ನೀಡುತ್ತಲೇ, ಮತ್ತೊಂದೆಡೆ ಇರಾನ್ ತನ್ನ ವಿರೋಧಿಗಳಿಗೆ ಕಠಿಣ ಸಂದೇಶ ರವಾನಿಸಿದೆ. "ಹರ್ಮುಜ್ ಜಲಸಂಧಿ ಪ್ರದೇಶವು ಸದ್ಯಕ್ಕೆ ಯುದ್ಧ ವಲಯವಾಗಿದೆ. ನಮ್ಮ ಶತ್ರುಗಳು ಮತ್ತು ಅವರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಇಲ್ಲಿ ಪ್ರವೇಶವಿಲ್ಲ" ಎಂದು ಇರಾನ್ ಸ್ಪಷ್ಟಪಡಿಸಿದೆ.
➤ ಡೊನಾಲ್ಡ್ ಟ್ರಂಪ್ ಎಚ್ಚರಿಕೆ: ಇರಾನ್‌ನ ಈ ನಿರ್ಧಾರದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸದಿದ್ದರೆ ಮತ್ತು ಅಂತರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ ಇರಾನ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
➤ ಯುದ್ಧದ ಹೆಸರಲ್ಲಿ ದೇಣಿಗೆ ವಂಚನೆ: ಮಧ್ಯಪ್ರಾಚ್ಯದ ಸಂಘರ್ಷವನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ವಂಚಕ ಜಾಲಗಳು, ಸಂತ್ರಸ್ತರಿಗೆ ಸಹಾಯ ಮಾಡುವ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಎಚ್ಚರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ವಂಚನೆ ಪ್ರಕರಣಗಳು ಹೆಚ್ಚು ದಾಖಲಾಗಿವೆ.
ನಕಲಿ ಚಾರಿಟಿ ಸಂಸ್ಥೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ನಾಪತ್ತೆಯಾಗುವ ತಂಡಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.
ಶುಕ್ರವಾರ, 27 ಮಾರ್ಚ್ 2026
11:40 ಪೂರ್ವಾಹ್ನ
Daily PDF
ಹರ್ಮುಜ್ ಜಲಸಂಧಿ ಮೂಲಕ ಸಂಚಾರಕ್ಕೆ ವಿನಾಯಿತಿ: ಭಾರತ ಸೇರಿದಂತೆ 5 ಮಿತ್ರ ರಾಷ್ಟ್ರಗಳಿಗೆ ಇರಾನ್ ವಿಶೇಷ ಅನುಮತಿ
Authored by:
Akshata Halli