➤ ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಭಾರತದಲ್ಲಿ ರಾಷ್ಟ್ರೀಯ ಹಿಂದಿ ದಿವಸ್‌ (Hindi Diwas) ಅನ್ನು ಆಚರಿಸಲಾಗುತ್ತದೆ.
ಹಿಂದಿ ದಿವಸ್‌ ಹಿನ್ನೆಲೆ ಮತ್ತು ಇತಿಹಾಸ:
- 14 ಸೆಪ್ಟೆಂಬರ್ 1949: ಭಾರತೀಯ ಸಂವಿಧಾನ ಸಭೆಯು (Constituent Assembly) ದೇವನಾಗರಿ ಲಿಪಿಯಲ್ಲಿರುವ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ (Official Language of the Union) ಅಂಗೀಕರಿಸಿತು.
- ಮುನ್ಷಿ-ಅಯ್ಯಂಗಾರ್ ಸೂತ್ರ (Munshi-Ayyangar Formula): ಸಂವಿಧಾನ ಸಭೆಯ ಸದಸ್ಯರಾದ ಕೆ. ಎಂ. ಮುನ್ಷಿ ಮತ್ತು ಎನ್‌. ಗೋಪಾಲಸ್ವಾಮಿ ಅಯ್ಯಂಗಾರ್ ಅವರ ನೇತೃತ್ವದಲ್ಲಿ ರೂಪುಗೊಂಡ ಈ ಸೂತ್ರದ ಮೂಲಕ ಹಿಂದಿಗೆ ಆಡಳಿತ ಭಾಷೆಯ ಸ್ಥಾನಮಾನ ನೀಡಿ, ಇಂಗ್ಲಿಷ್ ಭಾಷೆಯನ್ನು 15 ವರ್ಷಗಳ ಕಾಲ ಸಹ-ಆಡಳಿತ ಭಾಷೆಯಾಗಿ ಮುಂದುವರಿಸಲು ನಿರ್ಧರಿಸಲಾಯಿತು.
- ಮೊದಲ ಆಚರಣೆ (1953): ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸೂಚನೆಯಂತೆ 1953 ಸೆಪ್ಟೆಂಬರ್ 14 ರಿಂದ ಅಧಿಕೃತವಾಗಿ ಪ್ರತಿ ವರ್ಷ 'ಹಿಂದಿ ದಿವಸ್' ಆಚರಿಸಲಾಗುತ್ತಿದೆ.
- ಸಾಹಿತ್ಯಿಕ ಕೊಡುಗೆ: ಹಿಂದಿ ಸಾಹಿತಿ ಬೆವೊಹಾರ್ ರಾಜೇಂದ್ರ ಸಿಂಹ (Beohar Rajendra Simha) ಅವರ 50ನೇ ಜನ್ಮದಿನದ ನೆನಪಿಗಾಗಿ 14 ಸೆಪ್ಟೆಂಬರ್ ಅನ್ನು ಈ ದಿನಾಂಕವಾಗಿ ಆಯ್ಕೆ ಮಾಡಲಾಯಿತು.
ಸಾಂವಿಧಾನಿಕ ನಿಯಮಗಳು ಹಾಗೂ ವಿಧಿಗಳು
- ಭಾಗ XVII (Part XVII): ಭಾರತೀಯ ಸಂವಿಧಾನದ ಭಾಗ 17ರಲ್ಲಿ ಆಡಳಿತ ಭಾಷೆಗೆ (Official Languages) ಸಂಬಂಧಿಸಿದ ನಿಯಮಗಳಿವೆ (ವಿಧಿ 343 ರಿಂದ 351).
- ವಿಧಿ 343(1): ದೇವನಾಗರಿ ಲಿಪಿಯಲ್ಲಿರುವ ಹಿಂದಿ ಭಾಷೆಯು ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿದೆ.
- ವಿಧಿ 351 : ಹಿಂದಿ ಭಾಷೆಯ ಪ್ರಸಾರ, ಪ್ರಚಾರ ಮತ್ತು ಭಾರತದ ಸಮ್ಮಿಶ್ರ ಸಂಸ್ಕೃತಿಯನ್ನು (Composite Culture) ಬಿಂಬಿಸಲು ಅದನ್ನು ಅಭಿವೃದ್ಧಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ.
- 8ನೇ ಅನುಸೂಚಿ (8th Schedule): ಸಂವಿಧಾನ ಅಂಗೀಕರಿಸಿದ 22 ಪ್ರಾದೇಶಿಕ ಭಾಷೆಗಳಲ್ಲಿ (ಕನ್ನಡ ಸೇರಿದಂತೆ) ಹಿಂದಿಯೂ ಒಂದಾಗಿದೆ.
ಪ್ರಮುಖ ಗೊಂದಲ ಶಮನ: 'ರಾಷ್ಟ್ರಭಾಷೆ' ವರ್ಸಸ್ 'ಆಡಳಿತ ಭಾಷೆ': ಹಿಂದಿ ಭಾರತದ ರಾಷ್ಟ್ರಭಾಷೆಯೇ? (National Language): ಇಲ್ಲ. ಭಾರತೀಯ ಸಂವಿಧಾನದಲ್ಲಿ ಯಾವುದೇ ಭಾಷೆಗೆ "ರಾಷ್ಟ್ರಭಾಷೆ" (National Language) ಎಂಬ ಅಧಿಕೃತ ಸ್ಥಾನಮಾನ ನೀಡಲಾಗಿಲ್ಲ.
- ಹಿಂದಿ ಮತ್ತು ಇಂಗ್ಲಿಷ್ ಎರಡೂ ಕೇಂದ್ರ ಸರ್ಕಾರದ ಆಡಳಿತ ಭಾಷೆಗಳು (Official Languages) ಆಗಿರುತ್ತವೆ.
- ಅಧಿಕೃತ ಆಡಳಿತ ಭಾಷೆಗಳ ಕಾಯ್ದೆ 1963 (Official Languages Act, 1963): 1965ರ ನಂತರವೂ ಇಂಗ್ಲಿಷ್ ಭಾಷೆಯನ್ನು ಕೇಂದ್ರ ಸರ್ಕಾರದ ಆಡಳಿತಾತ್ಮಕ ಮತ್ತು ಸಂಸತ್ತಿನ ಕಲಾಪಗಳಿಗಾಗಿ ಹಿಂದಿಯೊಂದಿಗೆ ಅನಿರ್ದಿಷ್ಟಾವಧಿಗೆ ಬಳಸಲು ಈ ಕಾಯ್ದೆ ಅವಕಾಶ ನೀಡಿತು.
ಗಮನಿಸಿ: ವಿಶ್ವ ಹಿಂದಿ ದಿನ: 1975 ರ ನಾಗ್ಪುರ ವಿಶ್ವ ಹಿಂದಿ ಸಮ್ಮೇಳನದ ಸವಿನೆನಪಿಗಾಗಿ ಡಾ. ಮನ್‌ಮೋಹನ್ ಸಿಂಗ್ ಅವರಿಂದ 2006 ರಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದಿ ದಿನವನ್ನು ಪ್ರತಿ ವರ್ಷ ಜನವರಿ 10 ರಂದು ಜಾಗತಿಕ ಮಟ್ಟದಲ್ಲಿ ಭಾಷೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಆಚರಿಸಲಾಗುತ್ತದೆ.