➤ ಭಾರತದ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ 'ಗಿಗ್ ಆರ್ಥಿಕತೆ' (Gig Economy) ಮತ್ತು ಅದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆಧಾರಿತ ಉದ್ಯೋಗಿಗಳಿಗೆ ಕೇಂದ್ರ ಸರಕಾರ ಬಿಗ್ ಅಪ್ಡೇಟ್ ಒಂದನ್ನು ನೀಡಿದೆ. ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ಗಿಗ್ ಉದ್ಯೋಗಿಗಳ ಸಂಪೂರ್ಣ ದತ್ತಾಂಶವನ್ನು (Data) ಸರಕಾರದ ಅಧಿಕೃತ 'ಇ-ಶ್ರಮ್' (e-Shram) ಪೋರ್ಟಲ್ ಜೊತೆಗೆ ಕಡ್ಡಾಯವಾಗಿ ಸಂಯೋಜಿಸುವಂತೆ (Integration) ಎಲ್ಲಾ ಅಗ್ರಿಗೇಟರ್ ಕಂಪನಿಗಳಿಗೆ (ಉದಾಹರಣೆಗೆ: Swiggy, Zomato, Ola, Uber, Blinkit ಇತ್ಯಾದಿ) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದಕ್ಕೆ ಜೂನ್ 22ರ ಅಂತಿಮ ಗಡುವು (Deadline) ನಿಗದಿಪಡಿಸಲಾಗಿದೆ.
➤ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು:
1.ಗಿಗ್ ವರ್ಕರ್ಸ್ (Gig Workers): ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದಿಂದ ಹೊರತಾಗಿ, ಮುಕ್ತ ಮಾರುಕಟ್ಟೆಯಲ್ಲಿ ಗುತ್ತಿಗೆ ಅಥವಾ ಅಲ್ಪಾವಧಿ ಆಧಾರದ ಮೇಲೆ ಕೆಲಸ ಮಾಡುವ ಸ್ವತಂತ್ರ ಕಾರ್ಮಿಕರು.
2.ಪ್ಲಾಟ್‌ಫಾರ್ಮ್ ವರ್ಕರ್ಸ್ (Platform Workers): ಆನ್‌ಲೈನ್ ಆ್ಯಪ್‌ಗಳು ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ (Swiggy, Zomato, Amazon, Dunzo ಇತ್ಯಾದಿ) ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಉದ್ಯೋಗಿಗಳು.
➤ ಸಿಗಲಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳು: ಕೇಂದ್ರ ಸರಕಾರವು 'ಸಾಮಾಜಿಕ ಭದ್ರತಾ ಸಂಹಿತೆ - 2020' (Code on Social Security, 2020) ಅಡಿಯಲ್ಲಿ ಈ ಕೆಳಗಿನ ಪ್ರಯೋಜನಗಳನ್ನು ಜಾರಿಗೊಳಿಸಲು ಯೋಜನೆ ರೂಪಿಸುತ್ತಿದೆ:
- ಅಪಘಾತ ವಿಮೆ ಮತ್ತು ಆರೋಗ್ಯ ರಕ್ಷಣೆ: 'ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ' (AB-PMJAY) ಅಡಿಯಲ್ಲಿ ಉಚಿತ ಆರೋಗ್ಯ ಸೌಲಭ್ಯ.
- ಹೆರಿಗೆ ಸೌಲಭ್ಯ ಮತ್ತು ನಗದು ಪ್ರಯೋಜನಗಳು: ಮಹಿಳಾ ಗಿಗ್ ಕಾರ್ಮಿಕರಿಗೆ ಹೆರಿಗೆ ರಜೆ ಮತ್ತು ಆರ್ಥಿಕ ನೆರವು.
- ವೃದ್ಧಾಪ್ಯ ರಕ್ಷಣೆ (Pension): ಭವಿಷ್ಯದ ಭದ್ರತೆಗಾಗಿ ಪಿಂಚಣಿ ಯೋಜನೆಗಳು.
- ಶಿಕ್ಷಣ ಮತ್ತು ಇತರ ನೆರವು: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಹಾಗೂ ಅಂತ್ಯಸಂಸ್ಕಾರದ ವೆಚ್ಚಕ್ಕೆ ಧನಸಹಾಯ.
➤ ಇ-ಶ್ರಮ್ (e-Shram) ಪೋರ್ಟಲ್ ಎಂಬುದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಆಗಸ್ಟ್ 26, 2021 ರಂದು ಪ್ರಾರಂಭಿಸಿದ ದೇಶದ ಅಸಂಘಟಿತ ವಲಯದ ಕಾರ್ಮಿಕರ (Unorganised Workers) ಮೊದಲ ರಾಷ್ಟ್ರೀಯ ದತ್ತಾಂಶವಾಗಿದೆ (NDUW). ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಪ್ರತಿಯೊಬ್ಬ ಕಾರ್ಮಿಕನಿಗೂ ಅವರ ಸಾಮಾಜಿಕ ಭದ್ರತಾ ಸೌಲಭ್ಯಗಳ ಸುಲಭ ಸಮ್ಮಿಲನಕ್ಕಾಗಿ 12 ಅಂಕಿಗಳ ವಿಶಿಷ್ಟ 'ಸಾರ್ವತ್ರಿಕ ಖಾತೆ ಸಂಖ್ಯೆ' (Universal Account Number - UAN) ಹೊಂದಿರುವ ಇ-ಶ್ರಮ್ ಕಾರ್ಡ್ ಅನ್ನು ನೀಡಲಾಗುತ್ತದೆ.
ರವಿವಾರ, 31 ಮೇ 2026
10:16 ಅಪರಾಹ್ನ
Daily PDF
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ: ಜೂನ್ 22ರೊಳಗೆ 'ಇ-ಶ್ರಮ್' ಪೋರ್ಟಲ್ ಸಂಯೋಜನೆ ಕಡ್ಡಾಯ!
Authored by:
Akshata Halli