ಬೀಜಿಂಗ್, ಜ. 9: ನಿಗೂಢ ನ್ಯುಮೋನಿಯ ಕಾಯಿಲೆಗೆ ಕಾರಣವಾಗಿರುವ ಹೊಸ ಮಾದರಿಯ ವೈರಸ್, ಹತ್ತು ವರ್ಷಗಳಿಗೂ ಹೆಚ್ಚು ಸಮಯದ ಹಿಂದೆ ನೂರಾರು ಜನರ ಸಾವಿಗೆ ಕಾರಣವಾಗಿದ್ದ 'ಸಾರ್ಸ್' ವೈರಸ್ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಚೀನಾ ಭಾವಿಸಿದೆ. ಹೊಸ ಮಾದರಿಯ ನ್ಯುಮೋನಿಯ ವೈರಸ್ ಈಗಾಗಲೇ 59 ಮಂದಿಯನ್ನು ಬಾಧಿಸಿದೆ. ಹೊಸದಾಗಿ ನ್ಯುಮೋನಿಯಕ್ಕೆ ಕಾರಣವಾಗಿರುವುದು ಹೊಸ ಮಾದರಿಯ ಕೊರೋನವೈರಸ್ ಎಂಬ ಪ್ರಾಥಮಿಕ ನಿರ್ಧಾರಕ್ಕೆ ಪರಿಣತರು ಬಂದಿದ್ದಾರೆ ಎಂದು ಪ್ರಧಾನ ವಿಜ್ಞಾನಿ ಕ್ಸು ಜಿಯಾನ್‌ಗುವೊ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾಗೆ ಹೇಳಿದರು. ಹೊಸ ವೈರಸ್‌ನ ಅಸ್ತಿತ್ವವನ್ನು ಮಧ್ಯ ಚೀನಾದ ನಗರ ವುಹಾನ್‌ನಲ್ಲಿ ಡಿಸೆಂಬರ್ 31ರಂದು ಖಚಿತಪಡಿಸಲಾಗಿದೆ.