➤ ಪ್ರಸ್ತುತ ಭಾರತದಲ್ಲಿ 'ಕೇಂದ್ರ ಮೋಟಾರು ವಾಹನ ನಿಯಮಗಳು, 1989'ರ ಅಡಿಯಲ್ಲಿ ದ್ವಿಚಕ್ರ ಆಂಬುಲೆನ್ಸ್‌ಗಳಿಗೆ (Two-wheeled Ambulances) ಪ್ರತ್ಯೇಕ ವಾಹನ ವರ್ಗದ ಮಾನ್ಯತೆ ಇರಲಿಲ್ಲ. ಇದರಿಂದಾಗಿ ಇವುಗಳ ವಿನ್ಯಾಸ, ಭದ್ರತೆ, ನೋಂದಣಿ, ರೋಗಿ ಸಾಗಣೆ ಹಾಗೂ ತಾಂತ್ರಿಕ ಪರಿಶೀಲನೆಗೆ ರಾಷ್ಟ್ರೀಯ ಮಟ್ಟದ ಏಕರೂಪದ ಮಾನದಂಡಗಳಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದ್ವಿಚಕ್ರ ಆಂಬುಲೆನ್ಸ್‌ಗಳನ್ನು ಕಾನೂನುಬದ್ಧಗೊಳಿಸಲು ಮತ್ತು ಕಡ್ಡಾಯ ಮಾನದಂಡಗಳನ್ನು ನಿಗದಿಪಡಿಸಲು ಹೊಸ ಕರಡು ನಿಯಮಗಳನ್ನು (Draft Rules) ಪ್ರಸ್ತಾಪಿಸಿದೆ.
➤ AIS-209 Part 1:2026 ಮಾನದಂಡಗಳು: ಹೊಸ ನಿಯಮಾವಳಿಗಳ ಪ್ರಕಾರ, L2 ವರ್ಗದ (ದ್ವಿಚಕ್ರ) ವಾಹನಗಳಲ್ಲಿ ರೋಗಿ ಸಾಗಣೆ ವ್ಯವಸ್ಥೆ ಅಥವಾ ಆಂಬುಲೆನ್ಸ್ ಪರಿಕರಗಳನ್ನು ಜೋಡಿಸಿ ಸಿದ್ಧಪಡಿಸುವ ವಾಹನಗಳಿಗೆ AIS-209 Part 1:2026 ಮಾನದಂಡಗಳು ಅನ್ವಯವಾಗಲಿವೆ.
ಪ್ರಮುಖ ತಾಂತ್ರಿಕ ಮತ್ತು ಸುರಕ್ಷತಾ ನಿಯಮಗಳು:
- ಸುರಕ್ಷತಾ ಮಾನದಂಡಗಳು: ವಾಹನದ ಸ್ಥಿರತೆ (Vehicle Stability), ಬ್ರೇಕಿಂಗ್ ಕ್ಷಮತೆ (Braking Performance), ಪಾರ್ಕಿಂಗ್ ಬ್ರೇಕ್ ಹಾಗೂ ಹಿಂಭಾಗದ ವೀಕ್ಷಣೆ (Rear Visibility) ಕಡ್ಡಾಯ.
- ತುರ್ತು ದೀಪಗಳು (Emergency Top Lights): ಅಕ್ಟೋಬರ್ 1, 2027 ರ ನಂತರ ತಯಾರಾಗುವ ಎಲ್ಲಾ ದ್ವಿಚಕ್ರ ಆಂಬುಲೆನ್ಸ್‌ಗಳ ಮೇಲಿನ ತುರ್ತು ದೀಪಗಳು ನಿಗದಿತ AIS ಮಾನದಂಡವನ್ನು ಹೊಂದಿರಬೇಕು.
- ನೋಂದಣಿ ಮತ್ತು ಪರಿಶೀಲನೆ: ಇವುಗಳನ್ನು 'ಸಾರಿಗೆ ವಾಹನ' (Transport Vehicle) ಎಂದು ನೋಂದಾಯಿಸಬೇಕಾಗುತ್ತದೆ ಮತ್ತು ಪ್ರತಿ 2 ವರ್ಷಕ್ಕೊಮ್ಮೆ ಫಿಟ್‌ನೆಸ್ ಪ್ರಮಾಣಪತ್ರವನ್ನು (Fitness Certificate) ನವೀಕರಿಸಬೇಕು.
- ರಾಜ್ಯ ಸರ್ಕಾರಗಳ ಅಧಿಕಾರ: ಈ ಆಂಬುಲೆನ್ಸ್‌ಗಳು ಯಾವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ.
➤ ಪ್ರಮುಖ ಉದ್ದೇಶಗಳು ಮತ್ತು ಪ್ರಯೋಜನಗಳು:
- ಕೊನೆಯ ಮೈಲಿ ಆರೋಗ್ಯ ಸೇವೆ (Last-Mile Healthcare Access): ಕಿರಿದಾದ ರಸ್ತೆಗಳು, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಸಾಮಾನ್ಯ ನಾಲ್ಕು ಚಕ್ರದ ಆಂಬುಲೆನ್ಸ್‌ಗಳು ತಲುಪಲು ಸಾಧ್ಯವಾಗದಿದ್ದಾಗ ದ್ವಿಚಕ್ರ ಆಂಬುಲೆನ್ಸ್‌ಗಳು ವರದಾನವಾಗಲಿವೆ.
- ಸಮಯದ ಉಳಿತಾಯ: ಟ್ರಾಫಿಕ್ ಸಮಸ್ಯೆ ಇರುವ ನಗರ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ನೆರವು (First Response / Golden Hour care) ನೀಡಲು ಇದು ನೆರವಾಗುತ್ತದೆ.
- ಗುಣಮಟ್ಟ ಮತ್ತು ಸಾರ್ವಜನಿಕ ಭರವಸೆ: ಏಕರೂಪದ ಉತ್ಪಾದನೆ ಮತ್ತು ಪರೀಕ್ಷಾ ಮಾನದಂಡಗಳಿಂದ ವಾಹನಗಳ ಸುರಕ್ಷತೆ ಹೆಚ್ಚುತ್ತದೆ.