➤ ಫೆಬ್ರವರಿ 2026ರಲ್ಲಿ ಕೇಂದ್ರ ಸರ್ಕಾರವು ಅಸ್ಸಾಂನ ಬ್ರಹ್ಮಪುತ್ರ ನದಿಯ ಅಡಿಯಲ್ಲಿ ದೇಶದ ಮೊಟ್ಟಮೊದಲ 'ಅವಳಿ ಕೊಳವೆ' (Twin Tube) ಸುರಂಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ₹18,662 ಕೋಟಿ ವೆಚ್ಚದ ಈ ಯೋಜನೆಯು ರೈಲು ಮತ್ತು ನಾಲ್ಕು ಪಥದ ರಸ್ತೆ ಮಾರ್ಗ ಎರಡನ್ನೂ ಒಳಗೊಂಡಿರಲಿದ್ದು, ಈಶಾನ್ಯ ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಚೀನಾ ಗಡಿ ಭಾಗದಲ್ಲಿ ಭಾರತದ ಕಾರ್ಯತಂತ್ರದ ಬಲವನ್ನು ವೃದ್ಧಿಸಲಿದೆ.
➤ ಯೋಜನೆಯ ತಾಂತ್ರಿಕ ವಿನ್ಯಾಸ ಮತ್ತು ವಿಶೇಷತೆಗಳು: ಈ ಸುರಂಗವು ಕೇವಲ ರಸ್ತೆ ಮಾರ್ಗವಲ್ಲ, ಇದು ರೈಲು ಮತ್ತು ರಸ್ತೆ ಎರಡನ್ನೂ ಒಳಗೊಂಡಿರುವ ಬಹುಮಾದರಿ (Multimodal) ಯೋಜನೆಯಾಗಿದೆ.
- ಒಟ್ಟು ಉದ್ದ: 33.7 ಕಿಲೋಮೀಟರ್ ಉದ್ದದ ಗ್ರೀನ್‌ಫೀಲ್ಡ್ ಕಾರಿಡಾರ್.
- ನೀರೊಳಗಿನ ಸುರಂಗದ ಉದ್ದ: ಬ್ರಹ್ಮಪುತ್ರ ನದಿಯ ಅಡಿಯಲ್ಲಿ ಸುಮಾರು 15.79 ಕಿಲೋಮೀಟರ್ ಉದ್ದದ ಅವಳಿ ಸುರಂಗ ನಿರ್ಮಾಣವಾಗಲಿದೆ.
- ಅವಳಿ ಸುರಂಗದ ಕಾರ್ಯವೈಖರಿ: ಒಂದು ಸುರಂಗವು ರೈಲು ಸಂಚಾರಕ್ಕೆ ಮೀಸಲಾಗಿರುತ್ತದೆ ಮತ್ತೊಂದು ಸುರಂಗವು ನಾಲ್ಕು ಪಥಗಳ (4-lane) ಹೈಟೆಕ್ ಹೆದ್ದಾರಿಯಾಗಿ ಕಾರ್ಯನಿರ್ವಹಿಸಲಿದೆ.
- ಯೋಜನೆಯಲ್ಲಿ 1.26 ಕಿಮೀ ರಸ್ತೆ ಮತ್ತು 4 ಕಿಮೀ ರೈಲು ಮಾರ್ಗವನ್ನು 'ಕಟ್ ಅಂಡ್ ಕವರ್' ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುತ್ತದೆ.
➤ ಈ ಸುರಂಗ ಮಾರ್ಗವು ಅಸ್ಸಾಂನ ಎರಡು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ:
1. ಉತ್ತರ ದಂಡೆ: ಗೋಹಪುರ (ರಾಷ್ಟ್ರೀಯ ಹೆದ್ದಾರಿ-15)
2. ದಕ್ಷಿಣ ದಂಡೆ: ನುಮಾಲಿಗಢ (ರಾಷ್ಟ್ರೀಯ ಹೆದ್ದಾರಿ-715)
➤ ಪ್ರಸ್ತುತ ಗೋಹಪುರದಿಂದ ನುಮಾಲಿಗಢಕ್ಕೆ ತಲುಪಲು ಸುಮಾರು 240 ಕಿಲೋಮೀಟರ್ ಪ್ರಯಾಣಿಸಬೇಕಿದೆ (ಕಾಳಿಯಾಭೋಮೋರಾ ಸೇತುವೆಯ ಮೂಲಕ), ಇದಕ್ಕೆ 6 ಗಂಟೆ ಸಮಯ ಬೇಕು. ಈ ಸುರಂಗ ಮಾರ್ಗ ಪೂರ್ಣಗೊಂಡರೆ, ಈ ದೂರವು ಕೇವಲ 34 ಕಿಲೋಮೀಟರ್‌ಗೆ ಇಳಿಕೆಯಾಗಲಿದ್ದು, ಪ್ರಯಾಣದ ಸಮಯ 20 ನಿಮಿಷಗಳಿಗೆ ಕುಸಿಯಲಿದೆ!
➤ ಅಂದಾಜು ₹18,662 ಕೋಟಿ ವೆಚ್ಚದ ಈ ಬೃಹತ್ ಯೋಜನೆಯು ಇಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಅಂಡ್ ಕನ್ ಸ್ಟ್ರಕ್ಷನ್ (EPC) ಮಾದರಿಯಲ್ಲಿ ಜಾರಿಗೊಳ್ಳಲಿದ್ದು, ನಿರ್ಮಾಣ ಹಂತದಲ್ಲಿ ಸುಮಾರು 80 ಲಕ್ಷ ಮಾನವ ದಿನಗಳ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಸರಕು ಸಾಗಣೆ ವೆಚ್ಚವನ್ನು ತಗ್ಗಿಸಿ ಈಶಾನ್ಯ ಭಾರತದ ಆರ್ಥಿಕ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಉಂಟುಮಾಡಲಿದೆ.
➤ ಚೀನಾ ಗಡಿಯ ಸಮೀಪವಿರುವ ಅರುಣಾಚಲ ಪ್ರದೇಶಕ್ಕೆ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುವ ಈ ಯೋಜನೆಯು, 11 ಆರ್ಥಿಕ ಮತ್ತು 8 ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಪರಸ್ಪರ ಸಂಪರ್ಕಿಸುವುದಲ್ಲದೆ, ರಂಗಿಯಾ-ಮುಖೋಂಗ್ ಸೆಲೆಕ್ ಮತ್ತು ಫುರ್ಕೇಟಿಂಗ್-ಮರಿಯಾನಿ ರೈಲು ಮಾರ್ಗಗಳನ್ನು ಜೋಡಿಸುವ ಮೂಲಕ ಈಶಾನ್ಯ ಭಾರತದ ಕಾರ್ಯತಂತ್ರದ ಭದ್ರತೆ ಹಾಗೂ ಬಹುಮಾಧ್ಯಮ (Multimodal) ಆರ್ಥಿಕ ಪ್ರಗತಿಗೆ ವೇಗ ನೀಡಲಿದೆ.
ಮಂಗಳವಾರ, 17 ಫೆಬ್ರುವರಿ 2026
11:33 ಪೂರ್ವಾಹ್ನ
Daily PDF
ಭಾರತದ ಮೊಟ್ಟಮೊದಲ ನೀರೊಳಗಿನ 'ರೈಲು-ರಸ್ತೆ' ಸುರಂಗ: ಬ್ರಹ್ಮಪುತ್ರ ನದಿಯಡಿ ಐತಿಹಾಸಿಕ ಯೋಜನೆ
Authored by:
Akshata Halli