➤ ಬೆಂಗಳೂರಿನ ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರಿಗೆ ವಿಶ್ವಸಂಸ್ಥೆಯು ನೀಡುವ 2025ನೇ ಸಾಲಿನ ಪ್ರತಿಷ್ಠಿತ “ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ (UN Secretary-General’s Award for Gender Equality)” ಲಭಿಸಿದೆ. ಈ ಗೌರವವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಪ್ರಕಟಿಸಿದ್ದಾರೆ. ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ (UNMISS) ಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ತೋರಿದ ಅತ್ಯುತ್ತಮ ನಾಯಕತ್ವ ಮತ್ತು ಕಾರ್ಯಚಟುವಟಿಕೆಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
➤ ಈ ಪ್ರತಿಷ್ಠಿತ ಪ್ರಶಸ್ತಿಯು: ಲಿಂಗ ಸಮಾನತೆಯನ್ನು ಉತ್ತೇಜಿಸುವ, ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ, ಲಿಂಗ-ಪ್ರತಿಕ್ರಿಯಾಶೀಲ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಬಲಪಡಿಸುವ ವಿಶ್ವಸಂಸ್ಥೆಯ ಉಪಕ್ರಮಗಳನ್ನು ಗುರುತಿಸಲು ನೀಡಲಾಗುತ್ತದೆ. ವಿಶ್ವದಾದ್ಯಂತ ಇರುವ ಎಲ್ಲಾ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಗಳು ಮತ್ತು ಅಂಗಸಂಸ್ಥೆಗಳಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗುತ್ತದೆ. ತಜ್ಞರ ಸಮಿತಿಯ ಪರಿಶೀಲನೆಯ ನಂತರ, ಅಂತಿಮವಾಗಿ ವಿಶ್ವಸಂಸ್ಥೆಯೊಳಗಿನ ಮತದಾನ ಪ್ರಕ್ರಿಯೆ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. 2025ರಲ್ಲಿ ನಾಲ್ಕು ಅಂತಿಮ ಸ್ಪರ್ಧಿಗಳ ಪೈಕಿ ಮೇಜರ್ ಸ್ವಾತಿ ಅವರು ಅತ್ಯಧಿಕ ಮತಗಳನ್ನು ಪಡೆದು ಪ್ರಶಸ್ತಿಗೆ ಭಾಜನರಾದರು.
➤ “ಸಮಾನ ಪಾಲುದಾರರು, ಶಾಶ್ವತ ಶಾಂತಿ (Equal Partners, Lasting Peace)” ಎಂಬ ಯೋಜನೆಯನ್ನು ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ರೂಪಿಸಿ ಮುನ್ನಡೆಸಿದ್ದು, ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಮಹಿಳೆಯರ ಸಮಾನ ಪಾಲುದಾರಿಕೆಯನ್ನು ಖಚಿತಪಡಿಸುವುದು, ಸ್ಥಳೀಯ ಸಮುದಾಯಗಳೊಂದಿಗೆ ಪರಸ್ಪರ ನಂಬಿಕೆ ಬೆಳೆಸುವುದು ಮತ್ತು ಶಾಶ್ವತ ಶಾಂತಿ ಹಾಗೂ ಸಾಮಾಜಿಕ ಸ್ಥಿರತೆಯನ್ನು ಸಾಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಸುಡಾನ್‌ನಲ್ಲಿನ UNMISS ಅಡಿಯಲ್ಲಿ ಕಾರ್ಯನಿರ್ವಹಿಸಿದ Indian Engagement Team ಗೆ ಅವರು ನಾಯಕತ್ವ ವಹಿಸಿ, ಮಹಿಳಾ ಶಾಂತಿಪಾಲಕರ ಸಕ್ರಿಯ ಪಾತ್ರದ ಮೂಲಕ ಸಮುದಾಯ ಸಂಪರ್ಕ ಮತ್ತು ಶಾಂತಿಪಾಲನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಿದರು.
➤ ಯೋಜನೆಯ ಪ್ರಮುಖ ಸಾಧನೆಗಳು:-
=> ಮಹಿಳಾ ಶಾಂತಿಪಾಲಕರನ್ನು ಪರಿಣಾಮಕಾರಿಯಾಗಿ ನಿಯೋಜನೆ
=> ದೂರದ ಮತ್ತು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸುರಕ್ಷಿತ ಗಸ್ತು
=> ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಬಲವರ್ಧನೆ
=> ಮಹಿಳೆಯರು ಸಾರ್ವಜನಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸುರಕ್ಷಿತ ವಾತಾವರಣ
ಈ ಯೋಜನೆಯ ಮೂಲಕ 5,000ಕ್ಕೂ ಹೆಚ್ಚು ಮಹಿಳೆಯರಿಗೆ ನೇರ ನೆರವು ದೊರೆತಿದೆ.
➤ ಯೋಜನೆಯ ಮಹತ್ವ:-
=> ಲಿಂಗ ಸಮಾನತೆ ಶಾಂತಿಪಾಲನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಜಾಗತಿಕ ಮಾದರಿ
=> ಸ್ಥಳೀಯ ಸಮುದಾಯಗಳಲ್ಲಿ ವಿಶ್ವಸಂಸ್ಥೆಯ ಮೇಲಿನ ವಿಶ್ವಾಸ ವೃದ್ಧಿ
=> ಮಹಿಳಾ ನಾಯಕತ್ವವು ಶಾಂತಿ ಸ್ಥಾಪನೆಗೆ ಎಷ್ಟು ಅಗತ್ಯ ಎಂಬುದನ್ನು ಸ್ಪಷ್ಟಪಡಿಸಿದೆ
=> ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆಯತ್ತ ಮಹತ್ವದ ಹೆಜ್ಜೆ
➤ ಇದು ಭಾರತಕ್ಕೆ ಮತ್ತೊಂದು ಮಹತ್ವದ ಗೌರವ. ಇದಕ್ಕೂ ಮೊದಲು 2023ರಲ್ಲಿ ಭಾರತೀಯ ಸೇನೆಯ ಮೇಜರ್ ರಾಧಿಕಾ ಸೆನ್ ಅವರು ಇದೇ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿಯನ್ನು ಪಡೆದಿದ್ದರು. ಇದು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತದ ಬಲವಾದ ಪಾತ್ರವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.
ಮಂಗಳವಾರ, 13 ಜನವರಿ 2026
3:09 ಅಪರಾಹ್ನ
Daily PDF
ಭಾರತಕ್ಕೆ ಜಾಗತಿಕ ಹೆಮ್ಮೆ: UN ಪ್ರಶಸ್ತಿ ಗೆದ್ದ ಮೇಜರ್ ಸ್ವಾತಿ ಶಾಂತ ಕುಮಾರ್
Authored by:
Akshata Halli