* ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿದ ಯುನೆಸ್ಕೋದ ಮಹತ್ವದ ಅಂತರಸರ್ಕಾರಿ ಸಮಿತಿಯ (ICH) 20ನೇ ಅಧಿವೇಶನದ ಉದ್ಘಾಟನಾ ಸಮಾರಂಭವು ಡಿಸೆಂಬರ್ 7ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದ್ದಾರೆ.
* ಡಿಸೆಂಬರ್ 8ರಿಂದ 13ರವರೆಗೆ ನಡೆಯಲಿರುವ ಈ ಅಧಿವೇಶನವನ್ನು ಭಾರತ ಮೊದಲ ಬಾರಿಗೆ ಆಯೋಜಿಸುತ್ತಿರುವುದು ವಿಶೇಷ. ಯುನೆಸ್ಕೋ ಮಹಾನಿರ್ದೇಶಕ ಖಲೀದ್ ಎಲ್-ಎನಾನಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಯುನೆಸ್ಕೋಗೆ ಭಾರತದ ರಾಯಭಾರಿ ಮತ್ತು ಶಾಶ್ವತ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 190 ದೇಶಗಳಿಂದ 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಭೆಗೆ ಆಗಮಿಸಲಿದ್ದಾರೆ.
* ಈ ಅಧಿವೇಶನದ ವೇಳೆ ಭಾರತದ ನಾಮನಿರ್ದೇಶನವಾದ ‘ದೀಪಾವಳಿ’ ಹಬ್ಬವನ್ನು ಡಿಸೆಂಬರ್ 10ರಂದು ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರಿಸುವ ಕುರಿತು ಪರಿಶೀಲನೆ ನಡೆಯಲಿದೆ. ಈಗಾಗಲೇ ಭಾರತವು ಕುಂಭಮೇಳ, ದುರ್ಗಾ ಪೂಜೆ, ಗರ್ಬಾ ನೃತ್ಯ, ಯೋಗ, ವೇದ ಪಠಣ ಮತ್ತು ರಾಮಲೀಲಾ ಸೇರಿದಂತೆ 15 ಅಂಶಗಳನ್ನು ಈ ಪಟ್ಟಿಯಲ್ಲಿ ಹೊಂದಿದೆ.
* ಸಭೆಯ ಭಾಗವಾಗಿ ಭಾರತದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಗ್ಯಾಲರಿಗಳು, ಪ್ರದರ್ಶನ ಕಲೆಗಳು ಹಾಗೂ ರಾಜ್ಯ ಎಂಪೋರಿಯಗಳನ್ನು ಕೆಂಪು ಕೋಟೆ ಆವರಣದಲ್ಲಿ ಆಯೋಜಿಸಲಾಗುತ್ತದೆ. ಅಧಿವೇಶನದ ನಂತರವೂ ಈ ಪ್ರದರ್ಶನಗಳನ್ನು ಒಂದು ತಿಂಗಳು ಸಾರ್ವಜನಿಕ ವೀಕ್ಷಣೆಗೆ ತೆರೆಯುವ ಸಾಧ್ಯತೆಯಿದೆ. ಯುನೆಸ್ಕೋ ವಿಶ್ವಪರಂಪರೆ ತಾಣವಾಗಿರುವ ಕೆಂಪು ಕೋಟೆ ಈ ಜಾಗತಿಕ ಸಾಂಸ್ಕೃತಿಕ ಸಮಾರಂಭಕ್ಕೆ ವೇದಿಕೆಯಾಗುತ್ತಿರುವುದು ಭಾರತದ ಪರಂಪರೆ ಮತ್ತು ಗೌರವವನ್ನು ಮತ್ತಷ್ಟು ಎತ್ತಿಹಿಡಿದಂತಾಗಿದೆ.
ಸೋಮವಾರ, 08 ಡಿಸೆಂಬರ್ 2025
12:48 ಅಪರಾಹ್ನ
Daily PDF
ಭಾರತದ ಸಂಸ್ಕೃತಿಗೆ ಜಾಗತಿಕ ಗೌರವ: ಯುನೆಸ್ಕೋ ಅಮೂರ್ತ ಅಧಿವೇಶನ ಆರಂಭ
Authored by:
Akshata Halli