➤ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ಟ್ಯಾಕ್ಸಿ ದರದ ಕಿರಿಕಿರಿಯನ್ನು ತಪ್ಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಮೊದಲ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆಯಾದ 'ಭಾರತ್ ಟ್ಯಾಕ್ಸಿ' (Bharat Taxi) ಜೊತೆಗೆ ಎಎಐ ಒಪ್ಪಂದ ಮಾಡಿಕೊಂಡಿದ್ದು, ಇನ್ಮುಂದೆ ನಿಗದಿತ ದರದಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಲಭ್ಯವಾಗಲಿದೆ.
➤ ಭಾರತ್ ಟ್ಯಾಕ್ಸಿ (Bharat Taxi): ಇದು ಭಾರತದ ಮೊದಲ ಚಾಲಕ-ಮಾಲೀಕತ್ವದ ಸಹಕಾರಿ ಟ್ಯಾಕ್ಸಿ ಸೇವೆಯಾಗಿದೆ. 'ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್' (Sahakar Taxi Cooperative Ltd) ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ಅಧಿಕೃತವಾಗಿ ಚಾಲನೆ ನೀಡಿದ್ದರು.
➤ ಸರ್ಜ್ ಪ್ರೈಸಿಂಗ್‌ನಿಂದ ಮುಕ್ತಿ: ಖಾಸಗಿ ಆಪ್ ಆಧಾರಿತ ಟ್ಯಾಕ್ಸಿಗಳಲ್ಲಿ (Ola/Uber) ಬೇಡಿಕೆ ಹೆಚ್ಚಾದಂತೆ ದರವೂ ಏರಿಕೆಯಾಗುತ್ತದೆ (Surge Pricing). ಆದರೆ ಭಾರತ್ ಟ್ಯಾಕ್ಸಿಯಲ್ಲಿ ಯಾವುದೇ ಸರ್ಜ್ ಪ್ರೈಸಿಂಗ್ ಇರುವುದಿಲ್ಲ. ಪ್ರಯಾಣಿಕರು ಪಾರದರ್ಶಕ ಮತ್ತು ನಿಗದಿತ ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ.
➤ ಎಎಐ ಮತ್ತು ಭಾರತ್ ಟ್ಯಾಕ್ಸಿ ಒಪ್ಪಂದ: ಎಎಐ ಅಧ್ಯಕ್ಷರಾದ ವಿಪಿನ್ ಕುಮಾರ್ ಅವರು ಈ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿದ್ದಾರೆ. ವಿಮಾನ ನಿಲ್ದಾಣಗಳಿಂದ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ 'ಲಾಸ್ಟ್ ಮೈಲ್ ಕನೆಕ್ಟಿವಿಟಿ'ಯನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
➤ ಆರಂಭಿಕ ಹಂತದಲ್ಲಿ ಭಾರತದ ಪ್ರಮುಖ ಪ್ರಾದೇಶಿಕ ಮತ್ತು ಟೈರ್-2 ನಗರಗಳ ವಿಮಾನ ನಿಲ್ದಾಣಗಳಲ್ಲಿ ಈ ಸೇವೆ ಆರಂಭವಾಗಲಿದೆ:
1. ಗುಜರಾತ್: ರಾಜ್‌ಕೋಟ್, ವಡೋದರಾ, ಸೂರತ್, ಭುಜ್.
2. ಮಹಾರಾಷ್ಟ್ರ: ಪುಣೆ, ಔರಂಗಾಬಾದ್.
3. ಉತ್ತರ ಪ್ರದೇಶ: ವಾರಣಾಸಿ, ಕಾನ್ಪುರ, ಪ್ರಯಾಗ್‌ರಾಜ್, ಆಗ್ರಾ.
➤ ಚಾಲಕರಿಗೆ ಮಾಲೀಕತ್ವದ ಗೌರವ: ಈ ಮಾದರಿಯ ವಿಶೇಷತೆಯೆಂದರೆ ಇಲ್ಲಿ ಚಾಲಕರು ಕೇವಲ ಕಾರ್ಮಿಕರಲ್ಲ, ಬದಲಾಗಿ ಸಹಕಾರಿ ಸಂಘದ ಪಾಲುದಾರರು. ಇದರಿಂದ ಅವರಿಗೆ ಹೆಚ್ಚಿನ ಆದಾಯ ಭದ್ರತೆ ಮತ್ತು ಸಾಮಾಜಿಕ ಗೌರವ ಲಭ್ಯವಾಗುತ್ತದೆ. ಇದು 'ಆತ್ಮನಿರ್ಭರ ಭಾರತ' ಮತ್ತು 'ಸಹಕಾರ್ ಸೆ ಸಮೃದ್ಧಿ' ಕನಸನ್ನು ನನಸು ಮಾಡುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.
➤ ಭಾರತ್ ಟ್ಯಾಕ್ಸಿ ಈಗಾಗಲೇ ದೆಹಲಿ ಮೆಟ್ರೋ (DMRC), ದೆಹಲಿ ಟ್ರಾಫಿಕ್ ಪೊಲೀಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದು, ಸಾರಿಗೆ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಮುಂದಾಗಿದೆ.
ಮಂಗಳವಾರ, 10 ಫೆಬ್ರುವರಿ 2026
12:50 ಅಪರಾಹ್ನ
Daily PDF
ಪ್ರಯಾಣಿಕರಿಗೆ ಗುಡ್ ನ್ಯೂಸ್: ಎಎಐ ಮತ್ತು ಸಹಕಾರಿ 'ಭಾರತ್ ಟ್ಯಾಕ್ಸಿ' ನಡುವೆ ಐತಿಹಾಸಿಕ ಒಪ್ಪಂದ
Authored by:
Akshata Halli