➤ ಹೊಸ ದೆಹಲಿ: ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ನಿಗದಿಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, ಪ್ರಕರಣದ ವಿಚಾರಣೆಗಾಗಿ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವನ್ನು ರಚಿಸುವುದಾಗಿ ಮತ್ತು ಏಪ್ರಿಲ್ 7, 2026 ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಸೋಮವಾರ(16-02-2026) ಘೋಷಿಸಿದೆ.
➤ ವಿಚಾರಣಾ ವೇಳಾಪಟ್ಟಿ : ಸುಪ್ರೀಂ ಕೋರ್ಟ್ ಈ ಮಹತ್ವದ ಪ್ರಕರಣಕ್ಕೆ ಕಟ್ಟುನಿಟ್ಟಾದ ಸಮಯದ ಮಿತಿಯನ್ನು ನಿಗದಿಪಡಿಸಿದ್ದು, ಏಪ್ರಿಲ್ 22ರೊಳಗೆ ವಿಚಾರಣೆ ಪೂರ್ಣಗೊಳಿಸುವ ಗುರಿ ಹೊಂದಿದೆ:
- ಏಪ್ರಿಲ್ 7 ರಿಂದ ಏಪ್ರಿಲ್ 9: 2018ರ ತೀರ್ಪಿನ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದವರ (Review Petitioners) ಪರ ವಾದ ಆಲಿಕೆ.
- ಏಪ್ರಿಲ್ 14 ರಿಂದ ಏಪ್ರಿಲ್ 16: ಮರುಪರಿಶೀಲನೆಯನ್ನು ವಿರೋಧಿಸುವವರ (Respondents) ಪರ ವಾದ ಆಲಿಕೆ.
- ಏಪ್ರಿಲ್ 21: ಉತ್ತರ ಪ್ರತ್ಯುತ್ತರಗಳ (Rejoinders) ವಿಚಾರಣೆ.
- ಏಪ್ರಿಲ್ 22: ಅಂತಿಮ ವಾದ ಮತ್ತು ವಿಚಾರಣೆಯ ಮುಕ್ತಾಯ.
➤ 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ 4:1ರ ಬಹುಮತದೊಂದಿಗೆ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹಲವಾರು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.
- 2019ರಲ್ಲಿ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಆದರೆ ಅಂದಿನ ಪೀಠದ ಸದಸ್ಯರ ನಿವೃತ್ತಿಯಿಂದಾಗಿ ಈಗ ಹೊಸದಾಗಿ ಒಂಬತ್ತು ಸದಸ್ಯರ ಪೀಠವನ್ನು ರಚಿಸಲಾಗುತ್ತಿದೆ.
- ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸರ್ಕಾರವು ಮರುಪರಿಶೀಲನಾ ಅರ್ಜಿಗಳನ್ನು ಬೆಂಬಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
- ಮರುಪರಿಶೀಲನೆ ಪರವಾಗಿ ಕೃಷ್ಣ ಕುಮಾರ್ ಸಿಂಗ್ ಮತ್ತು ವಿರೋಧಿಸುವವರ ಪರವಾಗಿ ಶಾಶ್ವತಿ ಪರಿಯವರನ್ನು ನೋಡಲ್ ವಕೀಲರನ್ನಾಗಿ ನೇಮಿಸಲಾಗಿದೆ. ಕೆ. ಪರಮೇಶ್ವರ್ ಮತ್ತು ಶಿವಂ ಸಿಂಗ್ ಅವರು 'ಅಮಿಕಸ್ ಕ್ಯೂರಿ'ಗಳಾಗಿ (ನ್ಯಾಯಾಲಯದ ಮಿತ್ರರು) ಕಾರ್ಯನಿರ್ವಹಿಸಲಿದ್ದಾರೆ.
➤ ಈ ಪೀಠವು ಕೇವಲ ಶಬರಿಮಲೆ ಮಾತ್ರವಲ್ಲದೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 7 ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳನ್ನು ಚರ್ಚಿಸಲಿದೆ:
- ಸಂವಿಧಾನದ 25ನೇ ವಿಧಿ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಎಷ್ಟು?
- ಸಾಂವಿಧಾನಿಕ ನೈತಿಕತೆ' (Constitutional Morality) ಎಂದರೇನು?
- ಧಾರ್ಮಿಕ ಪದ್ಧತಿಗಳಲ್ಲಿ ನ್ಯಾಯಾಲಯಗಳು ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು?
- ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ಮತ್ತು ಪಾರ್ಸಿ ಮಹಿಳೆಯರ ಹಕ್ಕುಗಳ ಮೇಲಿನ ಪರಿಣಾಮ.
ಶಬರಿಮಲೆ ಮರುಪರಿಶೀಲನಾ ಅರ್ಜಿ: ಸೂರ್ಯ ಕಾಂತ್ ನೇತೃತ್ವದ 9 ಸದಸ್ಯರ ಪೀಠ ರಚನೆ
Published by Akshata Halli
17 ಫೆಬ್ರವರಿ 2026