* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಕುರಿತು ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿದ್ದಾರೆ. ಪರಿಷ್ಕೃತ ವೇತನ ಶ್ರೇಣಿ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
* ಪರಿಷ್ಕೃತ ವೇತನ ಶ್ರೇಣಿ ಜಾರಿ ಮಾಡದಿದ್ದರೆ ಜುಲೈ 29ರ ನಂತರ ಮುಷ್ಕರ ನಡೆಸುವುದಾಗಿ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದ್ದರು. ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯ ಸರಕಾರವು ಸಚಿವ ಸಂಪುಟ ಸಭೆ ನಡೆಸಿ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿದೆ.
* ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಶೇ 27.5 ವೇತನ ಪರಿಷ್ಕರಣೆ ಮಾಡಿದ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ನೀಡಿತ್ತು. ಬಳಿಕ ಸಿಎಂ ಇದನ್ನು ಜಾರಿ ತರುವ ಬಗ್ಗೆ ಹಣಕಾಸು ಇಲಾಖೆಯ ಮಾಹಿತಿ ಕೇಳಿದ್ದರು. ಇದೀಗ ಹಣಕಾಸು ಇಲಾಖೆ ವರದಿ ಬಳಿಕ ಸಿದ್ದರಾಮಯ್ಯ ಅವರು ಆಗಸ್ಟ್ 1 ರಿಂದ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಜುಲೈ 15 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
* ಈಗಾಗಲೇ ಶೇ 17ರಷ್ಟು ವೇತನ ಕೊಡಲಾಗುತ್ತಿದೆ. ಅದಕ್ಕಾಗಿ, ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಆಯೋಗದ ಶಿಫಾರಸಿನಂತೆ ಶೇ 27.50ಕ್ಕೆ ಹೆಚ್ಚಿಸಿದರೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ ಎನ್ನಲಾಗಿದೆ.
* ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗವು ಮಾರ್ಚ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 244 ಪುಟಗಳ ವರದಿಯನ್ನು ಸಲ್ಲಿಸಿತ್ತು. ಅಷ್ಟರಲ್ಲೇ ಲೋಕಸಭೆ ಚುನಾವಣೆ ಬಂದಿದ್ದರಿಂದಾಗಿ ಈ ಕುರಿತು ನಿರ್ಣಯ ಕೈಗೊಂಡಿರಲಿಲ್ಲ.
* ಆರಂಭಿಕ ವೃಂದದ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ₹ 17 ಸಾವಿರ ಇದ್ದು, ಅದನ್ನು ಗರಿಷ್ಠ ₹ 27 ಸಾವಿರಕ್ಕೆ ಹಾಗೂ ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ ಈಗ ₹ 1,04,600 ಇದ್ದು, ಅದನ್ನು ₹ 1,67,200 ಕ್ಕೆ ಪರಿಷ್ಕರಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದೆ.
* ತಿಂಗಳ ಪಿಂಚಣಿಯನ್ನು ಮೂಲ ವೇತನದ ಶೇ 50ರಷ್ಟು, ಕುಟುಂಬ ಪಿಂಚಣಿಯನ್ನು ಶೇ 30ರಷ್ಟು ಮುಂದುವರಿಸಿದೆ. ಪಿಂಚಣಿಯು ಕನಿಷ್ಠ ₹13,500ರಿಂದ ₹1,20,600 ವರೆಗೆ ನಿಗದಿ ಮಾಡಿದೆ . 70 ರಿಂದ 80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿ ಹೆಚ್ಚುವರಿ ಶೇ 10ರಷ್ಟು ಹೆಚ್ಚಳ ಆಗಬೇಕು ಎಂದು ಶಿಫಾರಸು ಮಾಡಲಾಗಿದೆ.
ಯಾವುದೆಲ್ಲ ಹೆಚ್ಚಳ?
* ವೇತನ ಶ್ರೇಣಿಗೆ ಅನುಗುಣವಾಗಿ, ವಾರ್ಷಿಕ ವೇತನ ಬಡ್ತಿ ದರ ಕನಿಷ್ಟ ₹400 ಇರುವವರಿಗೆ ಗರಿಷ್ಟ ₹650 ಹೆಚ್ಚಳ. ಕನಿಷ್ಟ ಇರುವವರಿಗೆ ₹3.100 ರಿಂದ ₹ 5 ಸಾವಿರಕ್ಕೆ ಹೆಚ್ಚಳ.
* ಸಮವಸ್ತ್ರ ಭತ್ಯೆ, 25 ರಷ್ಟು ಹೆಚ್ಚಳ
* ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ₹1 ಸಾವಿರದಿಂದ ₹2 ಸಾವಿರಕ್ಕೆ ಹೆಚ್ಚಳ
* ಗೃಹ ನಿರ್ಮಾಣ ಮುಂಗಡ ₹40 ಲಕ್ಷದಿಂದ ₹65 ಲಕ್ಷದವರೆಗೆ ಹೆಚ್ಚಳ
ಬುಧವಾರ, 17 ಜುಲೈ 2024
1:08 ಅಪರಾಹ್ನ
Daily PDF
7ನೇ ವೇತನ ಆಯೋಗ: ಆಗಸ್ಟ್ 1 ರಿಂದ ರಾಜ್ಯ ಸರಕಾರಿ ನೌಕರರ ವೇತನ ಹೆಚ್ಚಳ
Authored by:
Jyoti Angadi