ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.
ಪದಜೋಡಣೆ ವಿಧಾನ : ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ. ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು? ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು, ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ! ಇಲ್ಲಿ ಅವರಂಗಿ ಜೇಬು ಔರಂಗಜೇಬ್, ಮುರಿದು - ಮುರಾದ್ ಸೂಜಿ - ಶೂಜ ದಾರ - ದಾರ ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ ! ಎಷ್ಟು ಸರಳ ಅಲ್ಲವೇ ! ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು. ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.
ಮೈಂಡ್ ಮ್ಯಾಪ್ ವಿಧಾನ : ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ. ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಮೈಂಡ್ ಮ್ಯಾಪ್‌ನ ಒಂದು ಉದಾಹರಣೆ: ಸರಳವಾದ ತಾಳೆ ನೋಡುವ ಪದ್ಧತಿ ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ. ಹೀಗೆ ತಾಳೆ ನೋಡಿ ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2 ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು. ಉದಾ : 123ರ ವರ್ಗ ಎ) 15129 ಬಿ) 15139 ಸಿ) 25129 ಡಿ) 15229 ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ, 1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9 ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ. ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ ! ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು! ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.