ಅಕ್ರಮ ತಡೆಗಟ್ಟಲು KEA ಹೊಸ ಉಪಕ್ರಮ ಜಾರಿ : ನೇಮಕ ಪರೀಕ್ಷೆ 5ನೇ ಆಯ್ಕೆ ಅವಕಾಶ
Published by: Yallamma G | Date:7 ಮಾರ್ಚ್ 2025
Image not found

ನೇಮಕಾತಿ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಹೊಸ ಕ್ರಮವನ್ನು ಅಳವಡಿಸಿಕೊಳ್ಳುತ್ತಿದೆ. ನೇಮಕಾತಿ ಪರೀಕ್ಷೆಗಳ ಒಎಂಆರ್ ಶೀಟ್ ನಲ್ಲಿ ಅಭ್ಯರ್ಥಿಗಳು ಉತ್ತರಿಸಲು ಇದ್ದ ನಾಲ್ಕು ಆಯ್ಕೆಗಳ ಜತೆಗೆ 5ನೇ ಆಯ್ಕೆಯನ್ನು ಪರಿಚಯಿಸಿದೆ. ಜತೆಗೆ, ಪರೀಕ್ಷೆ ನಡೆಸಿದ ಒಂದೆರಡು ದಿನಗಳಲ್ಲಿಯೇ ಅಭ್ಯರ್ಥಿಗಳ ಒಎಂಆರ್ ಶೀಟ್ (ಉತ್ತರ ಪತ್ರಿಕೆ) ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.


                    ಮುಂದಿನ ದಿನಗಳಲ್ಲಿ ಕೆಇಎ ನಡೆಸುವ ನೇಮಕಾತಿ ಪರೀಕ್ಷೆಗಳ ಒಎಂಆರ್ ಶೀಟ್‌ನಲ್ಲಿ ಪ್ರತಿ ಪ್ರಶ್ನೆಗೂ ಐದು ಆಯ್ಕೆ/ವೃತ್ತಗಳಿರುತ್ತವೆ. ಮೊದಲ ನಾಲ್ಕು ಆಯ್ಕೆಗಳು 1, 2, 3 ಮತ್ತು 4ರಲ್ಲಿ ಸೂಕ್ತವಾದ ಒಂದು ಉತ್ತರವನ್ನು ಶೇಡ್ ಮಾಡಬೇಕು. ಆ ಪ್ರಶ್ನೆಗೆ ಉತ್ತರಿಸದೆ ಇದ್ದಲ್ಲಿ 5ನೇ ಆಯ್ಕೆಯನ್ನು ಶೇಡ್ ಮಾಡಬೇಕು. ಒಂದು ವೇಳೆ ಯಾವುದೇ ಆಯ್ಕೆಯನ್ನು ಶೇಡ್ ಮಾಡದಿದ್ದರೆ, ಆ ಪ್ರಶ್ನೆಗೆ 1/4 ಅಂಕವನ್ನು ಕಡಿತ ಮಾಡಲಾಗುತ್ತದೆ. ವೃತ್ತಗಳನ್ನು ಶೇಡ್ ಮಾಡುವಾಗ ಜಾಗರೂಕತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ನೀಲಿ/ಕಪ್ಪು ಇಂಕು ಬಾಲ್ ಪಾಯಿಂಟ್ ಪೆನ್ ಅನ್ನು ಬಳಸಿಕೊಂಡು ಆಯಾ ಪ್ರಶ್ನೆಗೆ ಸಂಖ್ಯೆಗೆ ಅನುಗುಣವಾಗಿ ಸರಿಯಾದ ಒಂದು ಉತ್ತರದ ವೃತ್ತವನ್ನು ಸಂಪೂರ್ಣವಾಗಿ ಶೇಡ್‌ ಮಾಡಬೇಕು. ಪ್ರತಿ ಪ್ರಶ್ನೆಗಳಿಗೆ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಳೆಯಲಾಗುತ್ತದೆ. ಉತ್ತರ ಪತ್ರಿಕೆಯಲ್ಲಿ ಸಹಿ ಮಾಡುವ ಮೊದಲು ನೋಂದಣಿ ಸಂಖ್ಯೆಯನ್ನು ಮತ್ತು ವರ್ಷನ್ ಕೋಡ್ ಅನ್ನು ಸರಿಯಾಗಿ ನಮೂದಿಸಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಲಾಗಿದೆ.


         ಪರೀಕ್ಷೆ ಅವಧಿಯಲ್ಲಿ ಮೂರನೇ ಬೆಲ್ ಆದ ಬಳಿಕ 5ನೇ ಕಾಲಂ ಭರ್ತಿ ಮಾಡಲು 5 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಈ ವೇಳೆ ಅಭ್ಯರ್ಥಿಗಳು ಯಾವ ಕಾಲಂ ಭರ್ತಿ ಮಾಡುತ್ತಿದ್ದಾರೆ ಎಂಬುದನ್ನು ಕೊಠಡಿ ಮೇಲ್ವಿಚಾರಕರು ಗಮನ ಹರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ನಿಯಮಗಳ ಪ್ರಕಾರ, ಹೆಚ್ಚುವರಿಯಾಗಿ ಒಂದು ಆಯ್ಕೆಯನ್ನು ನೀಡಲಾಗುತ್ತದೆ. ಅಭ್ಯರ್ಥಿಗೆ ನಾಲ್ಕರಲ್ಲಿ ಯಾವುದೇ ಉತ್ತರಗಳು ಗೊತ್ತಿರದಿದ್ದರೆ, 5ನೇ ಆಯ್ಕೆಯನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಆ ಪ್ರಶ್ನೆಗೆ ನಾಲ್ಕನೇ ಒಂದು ಭಾಗದ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.


          ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಅಕ್ರಮ ನಡೆಯುತ್ತಿದೆ ಎಂಬ ಅನುಮಾನಗಳು ಅಭ್ಯರ್ಥಿಗಳ ಮನಸ್ಸಿನಲ್ಲಿ ಸುಳಿಯಬಾರದು ಎಂಬ ದೃಷ್ಟಿಯಿಂದ 5ನೇ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.  


            ಪ್ರಾಧಿಕಾರವು ಜಾರಿ ಮಾಡಲಿರುವ ಈ ಹೊಸ ಪದ್ಧತಿ ಅಥವಾ ಐದು ಆಯ್ಕೆಗಳ ಹೊಸ ನಿಯಮ ಏಪ್ರಿಲ್ ನಲ್ಲಿ ನಡೆಯಲಿರುವ ಯುಜಿಸಿಇಟಿ 2025 ಪರೀಕ್ಷೆಗೆ ಅನ್ವಯಿಸುವುದಿಲ್ಲ. ಆ ಪರೀಕ್ಷೆಯಲ್ಲಿ ನಾಲ್ಕು ಆಯ್ಕೆಗಳೇ ಇರುತ್ತವೆ. ಗೊಂದಲ ಬೇಡ ಎಂದು ತಿಳಿಸಿದೆ.

Comments