* ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ 'ಹಂಪಿ ಉತ್ಸವ' ಇಂದಿನಿಂದ (ಫೆ,28) ಪ್ರಾರಂಭವಾಗಲಿದ್ದು ಮೂರು ದಿನಗಳ ಕಾಲ ನಡೆಯಲಿದೆ. ಹಾಡು, ನೃತ್ಯ, ವಿಚಾರಗೋಷ್ಠಿಗಳ ಮೂಲಕ ಲಕ್ಷಾಂತರ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ .* ಪ್ರಧಾನ ವೇದಿಕೆಯನ್ನು ಗಾಯತ್ರಿ ಪೀಠ ಸಮೀಪದ ಮೈದಾನದಲ್ಲಿ ನಿರ್ಮಿಸಲಾಗಿದ್ದು, ಹಂಪಿ ಉತ್ಸವದ ರೂವಾರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಹೆಸರನ್ನೇ ಇಡಲಾಗಿದೆ.* ಮೊದಲ ದಿನ ರಮೇಶ್ ಅರವಿಂದ್, ರಾಜೇಶ್ ಕೃಷ್ಣನ್, ಹನುಮಂತ, ಎರಡನೇ ದಿನ ಉಪೇಂದ್ರ, ಅರ್ಜುನ್ ಜನ್ಯ, ಕೊನೆಯ ದಿನ ವಿಜಯ್ ರಾಘವೇಂದ್ರ, ರಮ್ಯಾ, ಗುರುಕಿರಣ್ ಮನರಂಜನೆಯನ್ನು ನೀಡಲಿದ್ದಾರೆ.* ಹಂಪಿಯಲ್ಲಿ 6 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹಂಪಿಯ ಇತಿಹಾಸ ಕುರಿತು ವಿಚಾರಗೋಷ್ಠಿ ಶನಿವಾರ(ಮಾರ್ಚ್. 01) 2.30ಕ್ಕೆ ವಿರೂಪಾಕ್ಷ ದೇವಸ್ಥಾನದ ಬಳಿ ನಡೆಯಲಿದೆ. ‘ವಿಜಯನಗರ ವೈಭವ’ ಧ್ವನಿಬೆಳಕು ಮಾರ್ಚ್ 6ರವರೆಗೆ ಪ್ರದರ್ಶನಗೊಳ್ಳಲಿದೆ.* ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ(ಫೆ.28) ಸಂಜೆ 7.30ಕ್ಕೆ ಉತ್ಸವ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ.* ಎತ್ತು, ಕುರಿ, ಶ್ವಾನ , ಸಾವಯವ ವಸ್ತು ಪ್ರದರ್ಶನ, ಫಲಪುಷ್ಪ, ಚಿತ್ರಸಂತೆ, ಮತ್ಸ್ಯ ಮೇಳ, ಆಹಾರ ಮೇಳ, ಕುಸ್ತಿ, ಹೆಲಿಕಾಪ್ಟರ್ನಲ್ಲಿ ಹಂಪಿ ದರ್ಶನ, ದೋಣಿವಿಹಾರದಂತಹ ಹಲವು ಕಾರ್ಯಕ್ರಮಗಳು ಜರುಗಲಿವೆ.