* ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿ ಮಾಡಿದೆ.* ಈ ನಿಯಮ ಪ್ರಕಾರ ಇನ್ನು ಮುಂದೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸುವ ಬಗ್ಗೆ ಮೂರು ತಿಂಗಳೊಳಗೆ ತೀರ್ಮಾನ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.* ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು.* ಸಾಂವಿಧಾನಿಕ ಮಹತ್ವದ ಹುದ್ದೆಗಳ ಅಧಿಕಾರದ ಕುರಿತ ಗೊಂದಲಗಳಿಗೆ ಇತ್ತೀಚಿನ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ಜಟಾಪಟಿ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ತೆರೆ ಎಳೆದಿದೆ. ಮಸೂದೆಗೆ ಅಂಕಿತ ಹಾಕುವ ವಿಷಯದಲ್ಲಿ ಸ್ವತಃ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಡೆಡ್ಲೈನ್ ವಿಧಿಸುವ ನ್ಯಾಯಾಲಯದ ತೀರ್ಪು ದೇಶದ ನ್ಯಾಯಾಂಗ ಮತ್ತು ಶಾಸಕಾಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.* ‘ವಿಳಂಬ ಆದಲ್ಲಿ ಅದಕ್ಕೆ ಸೂಕ್ತ ಕಾರಣವನ್ನು ದಾಖಲಿಸಬೇಕು, ಸಂಬಂಧಿಸಿದ ರಾಜ್ಯಕ್ಕೆ ಅದನ್ನು ತಿಳಿಸಬೇಕು. ರಾಜ್ಯಗಳು ಕೂಡ ಜೊತೆಯಾಗಿ ಕೆಲಸ ಮಾಡಬೇಕು, ತಮ್ಮ ಮುಂದೆ ಇರಿಸಬಹುದಾದ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು, ಕೇಂದ್ರ ಸರ್ಕಾರ ನೀಡುವ ಸಲಹೆಗಳನ್ನು ತ್ವರಿತವಾಗಿ ಪರಿಗಣಿಸಬೇಕು’ ಎಂದು ಕೋರ್ಟ್ ಹೇಳಿದೆ.* ತಮಿಳುನಾಡು ರಾಜ್ಯಪಾಲರನ್ನು ತರಾಟೆಗೆ ತೆಗದುಕೊಂಡ ಸುಪ್ರೀಂ : - ಶುಕ್ರವಾರ ಮಧ್ಯರಾತ್ರಿ ವೇಳೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಅಪ್ಲೋಡ್ ಮಾಡಿದೆ. ಆ ತೀರ್ಪಿನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ನವೆಂಬರ್ 2023 ರಲ್ಲಿ 10 ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದು ಕಾನೂನುಬಾಹಿರ ಮತ್ತು ತಪ್ಪಾಗಿದೆ ಎಂದು ಘೋಷಿಸಿದೆ. ಈ 10 ಮಸೂದೆಗಳನ್ನು ರಾಜ್ಯ ವಿಧಾನಸಭೆಯು ಈಗಾಗಲೇ ಮರುಪರಿಶೀಲಿಸಿ ರಾಜ್ಯಪಾಲರಿಗೆ ಮರಳಿಸಿತ್ತು.