* ಗಲ್ಫ್ ರಾಷ್ಟ್ರಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುವೈತ್ ತನ್ನ ಅತ್ಯುನ್ನತ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ('The Order of Mubarak Al Kabeer') ಅನ್ನು ಭಾನುವಾರ (ಡಿ.22)ನೀಡಿ ಗೌರವಿಸಿದೆ. * ಪ್ರಧಾನಿ ಮೋದಿ ಅವರು ಕುವೈತ್ನ ಉನ್ನತ ನಾಯಕತ್ವದೊಂದಿಗಿನ ಮಾತುಕತೆಗೆ ಮುಂಚಿತವಾಗಿ ಬಯಾನ್ ಅರಮನೆಯಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ಗಾರ್ಡ್ ಆಫ್ ಆನರ್ ಅನ್ನು ಸ್ವೀಕರಿಸಿದರು. * 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಕುವೈತ್ನ ನೈಟ್ಹುಡ್ ಆರ್ಡರ್ ಆಗಿದೆ. ಪ್ರಧಾನಿ ಮೋದಿಗೆ ಇದು 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಭಾರತ-ಕುವೈತ್ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ಪ್ರಶಸ್ತಿಯನ್ನು ಕುವೈತ್ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ (Amir of Kuwait, Sheikh Meshal Al-Ahmad Al-Jaber Al-Sabah) ಅವರು ಪ್ರದಾನ ಮಾಡಿದರು.* ಇದನ್ನು ರಾಷ್ಟ್ರದ ಮುಖ್ಯಸ್ಥರು ಮತ್ತು ವಿದೇಶಿ ಸಾರ್ವಭೌಮರಿಗೆ ಮತ್ತು ವಿದೇಶಿ ರಾಜಮನೆತನದ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ನೀಡಲಾಗುತ್ತದೆ. ಈ ಹಿಂದೆ ಬಿಲ್ ಕ್ಲಿಂಟನ್, ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್ ಅವರಂತಹ ವಿದೇಶಿ ನಾಯಕರಿಗೆ ಪ್ರಶಸ್ತಿ ನೀಡಲಾಗಿದೆ. * ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಕುವೈತ್ಗೆ ಭೇಟಿ ನೀಡಿದ್ದಾರೆ. ಕಳೆದ 43 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.