➤ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ನ್ಯೂಜಿಲೆಂಡ್ ಸಂಸತ್ತು ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement - FTA) ಸಂಬಂಧಿಸಿದ ಅಗತ್ಯ ವಿಧೇಯಕವನ್ನು ಬಹುಮತದಿಂದ ಅಂಗೀಕರಿಸಿದೆ.ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ವಿಧೇಯಕದ ಪರವಾಗಿ 93 ಮತಗಳು ಹಾಗೂ ವಿರುದ್ಧವಾಗಿ 29 ಮತಗಳು ಬಿದ್ದಿದ್ದು, ಪ್ರಮುಖ ವಿರೋಧ ಪಕ್ಷವಾದ 'ಲೇಬರ್ ಪಾರ್ಟಿ' ಕೂಡ ಈ ಮಸೂದೆಗೆ ಬೆಂಬಲ ಸೂಚಿಸಿದೆ.
ವ್ಯಾಪಾರ ಒಪ್ಪಂದದ ಪ್ರಮುಖ ಮುಖ್ಯಾಂಶಗಳು:
- ಶೇಕಡಾ 95ರಷ್ಟು ಸರಕುಗಳ ಮೇಲೆ ಸುಂಕ ವಿನಾಯಿತಿ: ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ ಶೇ. 95ರಷ್ಟು ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ವಿನಾಯಿತಿ ನೀಡಲಾಗುತ್ತದೆ ಅಥವಾ ಗಣನೀಯವಾಗಿ ಕಡಿತಗೊಳಿಸಲಾಗುತ್ತದೆ.
- ಮೊದಲ ದಿನದಿಂದಲೇ ಲಾಭ: ಒಪ್ಪಂದ ಜಾರಿಗೆ ಬಂದ ಮೊದಲ ದಿನದಿಂದಲೇ ನ್ಯೂಜಿಲೆಂಡ್‌ನ ಶೇ. 57ರಷ್ಟು ರಫ್ತು ಸರಕುಗಳು ಸಂಪೂರ್ಣ ಸುಂಕ ರಹಿತವಾಗಲಿವೆ.
- ಕಿವಿ ಹಣ್ಣು ಉದ್ಯಮಕ್ಕೆ ಬಂಪರ್: ನ್ಯೂಜಿಲೆಂಡ್‌ನ ಕಿವಿ ಹಣ್ಣು (Kiwifruit) ರಫ್ತುದಾರರಿಗೆ ಮುಂಬರುವ 5 ವರ್ಷಗಳಲ್ಲಿ ಸುಮಾರು 125 ಮಿಲಿಯನ್ ಡಾಲರ್ ತೆರಿಗೆ ಉಳಿತಾಯವಾಗಲಿದೆ.
- ಭಾರತೀಯ ಸರಕುಗಳಿಗೆ 100% ಸುಂಕ ರಹಿತ ಪ್ರವೇಶ: ನ್ಯೂಜಿಲೆಂಡ್ ಮಾರುಕಟ್ಟೆಗೆ ತೆರಳುವ ಭಾರತದ ಶೇಕಡಾ 100 ರಷ್ಟು ಸರಕುಗಳಿಗೆ ಸಂಪೂರ್ಣ ಸುಂಕ ರಹಿತ ಪ್ರವೇಶ ಸಿಗಲಿದೆ.
ಈ ಒಪ್ಪಂದದಿಂದ ಭಾರತಕ್ಕೇ ಆಗುವ ಪ್ರಯೋಜನೆಗಳು:
- ಶ್ರಮನಿಷ್ಠ ವಲಯಗಳಿಗೆ ಪ್ರೋತ್ಸಾಹ: ಭಾರತದ ಜವಳಿ (Textiles), ಚರ್ಮ ಮತ್ತು ಪಾದರಕ್ಷೆ, ರತ್ನ ಮತ್ತು ಆಭರಣ, ಇಂಜಿನಿಯರಿಂಗ್ ಸರಕುಗಳು, ಸೆರಾಮಿಕ್ಸ್ ಹಾಗೂ ಸಂಸ್ಕರಿಸಿದ ಆಹಾರ ಉದ್ಯಮಗಳಿಗೆ ನ್ಯೂಜಿಲೆಂಡ್‌ನಲ್ಲಿ ಹೊಸ ಮಾರುಕಟ್ಟೆ ಸಿಗಲಿದೆ.
- $20 ಬಿಲಿಯನ್ ಹೂಡಿಕೆ: ಮುಂಬರುವ 15 ವರ್ಷಗಳಲ್ಲಿ ನ್ಯೂಜಿಲೆಂಡ್ ಸಂಸ್ಥೆಗಳು ಭಾರತದ ಮೂಲಸೌಕರ್ಯ, ಉತ್ಪಾದನೆ, ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ವಲಯಗಳಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಬದ್ಧತೆ ತೋರಿವೆ.
- ವೀಸಾ ಮತ್ತು ಉದ್ಯೋಗಾವಕಾಶಗಳು: ಭಾರತದ ನುರಿತ ವೃತ್ತಿಪರರಿಗೆ ವರ್ಷಕ್ಕೆ 5,000 ತಾತ್ಕಾಲಿಕ ಉದ್ಯೋಗ ವೀಸಾಗಳು ಹಾಗೂ 1,000 ಯುವಕರಿಗೆ 'ವರ್ಕಿಂಗ್ ಹಾಲಿಡೇ ವೀಸಾ' ಸೌಲಭ್ಯ ದೊರೆಯಲಿದೆ.
- ಕ್ಷೀರ ವಲಯಕ್ಕೆ ರಕ್ಷಣೆ: ಭಾರತ ತನ್ನ ಡೈರಿ (ಹಾಲಿನ ಉತ್ಪನ್ನಗಳು) ಮತ್ತು ಕೆಲವು ಸಂವೇದನಾಶೀಲ ಕೃಷಿ ವಲಯಗಳನ್ನು ಈ ಒಪ್ಪಂದದ ಸುಂಕ ವಿನಾಯಿತಿಯಿಂದ ಹೊರಗಿಟ್ಟು, ಸ್ಥಳೀಯ ರೈತರ ಹಿತಾಸಕ್ತಿಯನ್ನು ಕಾಯ್ದುಕೊಂಡಿದೆ.
➤ ಮಾರ್ಚ್ 2025ರಲ್ಲಿ ಆರಂಭವಾದ ಮಾತುಕತೆಯು ಏಪ್ರಿಲ್ 2026ರಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಅಂತಿಮ ರೂಪ ಪಡೆದಿತ್ತು. ಪ್ರಸ್ತುತ ಸಂಸತ್ತಿನ ಅನುಮೋದನೆ ದೊರೆತಿರುವುದರಿಂದ, 2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ದುಪ್ಪಟ್ಟುಗೊಳಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ಗುರಿಗೆ ಹೊಸ ವೇಗ ಸಿಕ್ಕಿದೆ.