* ಭಾರತದಲ್ಲಿ ಸಾಲು ಮರದ ತಿಮ್ಮಕ್ಕ ಅವರಂತೆಯೇ ಪರಿಸರ ಪ್ರೇಮಿ ಎಂದೇ ಖ್ಯಾತರಾಗಿರುವ ಕನ್ನಡ ನಾಡಿನ ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಅವರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.* 86 ವರ್ಷದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ(ಡಿಸೆಂಬರ್ 16) ಸಂಜೆ ವೇಳೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.* ತುಳಸಿಗೌಡ ಅವರು ತಮ್ಮ ಜೀವಿತಾವಧಿಯಲ್ಲಿ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳಸಿ ಪರಿಸರ ಪ್ರೇಮಿ ಎಂದೇ ಖ್ಯಾತವಾಗಿದ್ದರು. ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು.* ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಮೆಚ್ಚಿ ಭಾರತ ಸರ್ಕಾರದಿಂದ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.* 2020ರಲ್ಲಿ ಅಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ ಅವರಿಂದ ತುಳಸಿಗೌಡ ಅವರು ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು.* ಸಸ್ಯಗಳ ವಿಶ್ವಕೋಶ ಎಂದೇ ಕರೆಯಲಾಗುತ್ತಿದ್ದ ತುಳಸಿ ಗೌಡ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯಕ್ಕೆ ಸೇರಿದವರು. ಅವರು ತಮ್ಮ ಮೂವರು ಮಕ್ಕಳನ್ನು ಅಗಲಿದ್ದಾರೆ.* ಅರಣ್ಯ ಇಲಾಖೆಯ ಸಸ್ಯ ನರ್ಸರಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದ ತುಳಸಿಗೌಡ ಅವರಿಗೆ ಕರ್ನಾಟಕ ಅರಣ್ಯ ಇಲಾಖೆಯು ನಿವೃತ್ತಿಯ ನಂತರವೂ ಅವರು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು.