* ಎಲ್ಲಾ ಹಿರಿಯ ನಾಗರಿಕರಿಗೂ ಆಯುಷ್ಮಾನ್ ಭಾರತ್ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ವಿಸ್ತರಿಸಿದ ಒಂದೇ ವಾರದಲ್ಲಿ ಸುಮಾರು 2.16 ಲಕ್ಷ ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ.* ಕರ್ನಾಟಕದಿಂದ 11,613 ಮಂದಿ ಸೇರ್ಪಡೆಯಾಗಿದ್ದು, ಅತೀ ಹೆಚ್ಚು ನೋಂದಣಿ ಆಗಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನ ಪಡೆದಿದೆ.* ಹೊಸ ಫಲಾನುಭವಿಗಳ ಪೈಕಿ ಅತೀ ಹೆಚ್ಚು ಮಂದಿ ಕೇರಳಿಗರಾಗಿದ್ದು, ಇಲ್ಲಿನ 89,800 ಮಂದಿಗೆ ಕಾರ್ಡ್ ವಿತರಿಸಲಾಗಿದೆ. 2 ಮತ್ತು 3ನೇ ಸ್ಥಾನವನ್ನು ಕ್ರಮವಾಗಿ ಮಧ್ಯಪ್ರದೇಶ (53,000) ಮತ್ತು ಉತ್ತರ ಪ್ರದೇಶ (47,000) ಪಡೆದುಕೊಂಡಿವೆ. ತಮಿಳುನಾಡು (3156), ತೆಲಂಗಾಣ (3056) ಮತ್ತು ಆಂಧ್ರಪ್ರದೇಶ (3488) ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ರಾಜ್ಯಗಳಲ್ಲಿ ನೋಂದಣಿ ಪ್ರಮಾಣ ಕಡಿಮೆ ಇದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.* ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಇದರಲ್ಲಿ ರೂ. 5 ಲಕ್ಷದವರೆಗೂ ಹಿರಿಯ ನಾಗರಿಕರು ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ.* ಒಂದೇ ಮನೆಯಲ್ಲಿ ವಯಸ್ಸಾದ ಅನೇಕ ಮಂದಿ ವಾಸಿಸುವ ಸಂದರ್ಭಗಳಲ್ಲಿ ರೂ. 5 ಲಕ್ಷ ಮಿತಿಯೊಳಗೆ ಎಲ್ಲಾ ಅರ್ಹ ಸದಸ್ಯರು ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು.