ಆತಂಕ ಏನು? 5ಜಿ ಉಪಕರಣಗಳನ್ನು ತಯಾರಿಸುವ ಹುವಾವೆ ಸಂಸ್ಥೆಯು ಚೀನಾ ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿದೆ ಎಂಬುದು ಹಲವು ದೇಶಗಳ ಆರೋಪ. ಒಂದು ವೇಳೆ ತಂತ್ರಜ್ಞಾನ ಅಭಿವೃದ್ಧಿಗೆ ಹುವಾವೆ ಸಂಸ್ಥೆಗೆ ಅನುಮತಿ ನೀಡಿದರೆ, ಮಾಹಿತಿಯು ಚೀನಾ ಸರ್ಕಾರಕ್ಕೆ ರವಾನೆಯಾಗುತ್ತದೆ ಎಂಬುದು ಆತಂಕಕ್ಕೆ ಮೂಲ ಕಾರಣ. ಹುವಾವೆ ಕಂಪನಿಯ ಸ್ಥಾಪಕ ರೆನ್ ಝೇಂಗ್‌ಪೇ ಅವರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿ, 9 ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಅಮೆರಿಕ ಎಚ್ಚರಿಕೆ, ಚೀನಾ ಒತ್ತಡ ಹುವಾವೆ ಸಂಸ್ಥೆಗೆ ಅನುಮತಿ ನೀಡಬೇಡಿ ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿತ್ತು. ಅದರೆ ಅನುಮತಿ ನೀಡುವಂತೆ ಭಾರತದ ಮೇಲೆ ಚೀನಾ ಒತ್ತಡ ಹೇರಿತ್ತು. ಹಿಂದೆ ಸರಿದಲ್ಲಿ, ಭಾರತವು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿತ್ತು. ಹುವಾವೆಗೆ ಅವಕಾಶ ನೀಡುವ ಸಂಬಂಧ ವಸ್ತುನಿಷ್ಠವಾಗಿ ಹಾಗೂ ಸ್ವತಂತ್ರ ನಿರ್ಧಾರ ತಳೆಯುವಂತೆ ಭಾರತಕ್ಕೆ ಮನವಿಯನ್ನೂ ಮಾಡಿತ್ತು. ಸಮಸ್ಯೆಯ ಮೂಲ ಇತ್ತೀಚೆಗೆ ಚೀನಾ ಸರ್ಕಾರ ಹೊಸ ಭದ್ರತಾ ಕಾನೂನು ಜಾರಿಗೆ ತಂದಿದೆ. ಇದರನ್ವಯ ವ್ಯಕ್ತಿಗಳು ಅಥವಾ ಸಂಸ್ಥೆಗಳು ದೇಶದ ಗುಪ್ತಚರ ವಿಭಾಗಕ್ಕೆ ಸಹಾಯ ಹಾಗೂ ಸಹಕಾರ ನೀಡಬೇಕಿದೆ. ಹುವಾವೆ ಸೇರಿದಂತೆ ಎಲ್ಲ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತಿದ್ದು, ಗುಪ್ತಚರ ಇಲಾಖೆಯ ಜತೆ ಮಾಹಿತಿ ಹಂಚಿಕೊಳ್ಳುವ ಸಂದರ್ಭ ಬರಬಹುದು ಎಂಬ ಕಾರಣಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗುತ್ತಿದೆ. ಚೀನಾ–ಅಮೆರಿಕ ಜಟಾಪಟಿ ಮೊಬೈಲ್ ಮೊದಲಾದ ಉಪಕರಣಗಳ ಮೂಲಕ ಹುವಾವೆ ಸಂಸ್ಥೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪವಿದೆ. 2012ರಲ್ಲೇ ಭದ್ರತಾ ಬೆದರಿಕೆ ಬಗ್ಗೆ ಅಮೆರಿಕ ಎಚ್ಚರಿಸಿತ್ತು. ಈ ಸಂಬಂಧ ಸಂಸ್ಥೆಯ ವಿರುದ್ಧ ಅಮೆರಿಕವು ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಬ್ಯಾಂಕ್ ವಂಚನೆ, ನ್ಯಾಯಾಂಗ ನಿಂದನೆ ಹಾಗೂ ‘ಟಿ–ಮೊಬೈಲ್‌’ ಸಂಸ್ಥೆಯ ತಂತ್ರಜ್ಞಾನ ಕಳ್ಳತನದ ಆರೋಪವೂ ಸಂಸ್ಥೆಯ ಮೇಲಿದೆ. ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ಉಲ್ಲಂಘಿಸಿದ ಆರೋಪದ ಮೇಲೆ ಹುವಾವೆ ಸಂಸ್ಥಾಪಕ ರೆನ್ ಅವರ ಪುತ್ರಿ ಹಾಗೂ ಸಂಸ್ಥೆಯ ಸಿಎಫ್‌ಒ ಮೆಂಗ್ ವಾಂಗ್‌ಝೌ ಅವರನ್ನು ಬಂಧಿಸಲಾಗಿತ್ತು. ಅಮೆರಿಕದ ಈ ನಡೆ ಚೀನಾವನ್ನು ಕೆರಳಿಸಿತ್ತು. ಭದ್ರತಾ ಅಪಾಯದ ಕಾರಣವೊಡ್ಡಿ ಹುವಾವೆ ಉತ್ಪನ್ನಗಳನ್ನು ಬಳಸದಂತೆ ಅಮೆರಿಕ ತನ್ನ ನಾಗರಿಕರಿಗೆ ಸೂಚನೆ ನೀಡಿತ್ತು. ಈ ಬೆಳವಣಿಗೆಗಳು ಎರಡೂ ದೇಶಗಳ ನಡುವೆ ಜಟಾಪಟಿಗೆ ಕಾರಣವಾಗಿವೆ. ಬ್ರಿಟನ್ ಅನುಮತಿ 5–ಜಿ ಡೇಟಾ ನೆಟ್‌ವರ್ಕ್‌ಗೆ ಸಂಬಂಧಿಸಿದ ಉಪಕರಣಗಳ ಪೂರೈಕೆಗೆ ಇಂಗ್ಲೆಂಡ್ ಹಸಿರು ನಿಶಾನೆ ತೋರಿಸಿದೆ. ಆದರೆ ಅತಿಮುಖ್ಯ ಭಾಗಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ. ಆಂಟೆನಾ ಸೇರಿದಂತೆ ಇತರ ಪರಿಕರಗಳನ್ನು ಹುವಾವೆ ತಯಾರಿಸಬಹುದು. ಬೆಂಗಳೂರಿನಲ್ಲಿ ಅತಿ ದೊಡ್ಡ ಘಟಕ ಹುವಾವೆ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿದೆ. ಇದು ಆ ಸಂಸ್ಥೆಯು ವಿದೇಶದಲ್ಲಿ ಆರಂಭಿಸಿದ ಮೊದಲ ಕೇಂದ್ರ. 20 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‌ ಅನ್ನು ಸುಮಾರು ₹1,051 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ 3,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಶೇ 98ರಷ್ಟು ಮಂದಿ ಸ್ಥಳೀಯರೇ ಇದ್ದಾರೆ ಎಂದು ಸಂಸ್ಥೆ ಹೇಳಿದೆ. ಐಪಿ ಆಧರಿತ ದತ್ತಾಂಶ ವರ್ಗಾವಣೆ, ಬಿಎಸ್‌ಎಸ್‌, ಒಎಸ್‌ಎಸ್‌, ಟರ್ಮಿನಲ್‌ ಡಿವೈಸ್‌ ಮುಂತಾಗಿ ಅತ್ಯಾಧುನಿಕ ತಂತ್ರಜ್ಞಾನದ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ಜಾಗತಿಕ ಮಾರುಕಟ್ಟೆಗೆ ಒದಗಿಸುವ ನಿಟ್ಟಿನಲ್ಲಿ ಹುವಾವೆ ಸಂಸ್ಥೆಯ ಬೆಂಗಳೂರು ಘಟಕವು ಮಹತ್ವದ ಪಾತ್ರ ವಹಿಸುತ್ತದೆ. ಭಾರತದಲ್ಲಿ ಪ್ರತಿಭಾವಂತ ಸಾಫ್ಟ್‌ವೇರ್‌ ತಜ್ಞರು ಇರುವುದನ್ನು ಮನಗಂಡ ಹುವಾವೆ ಸಂಸ್ಥೆಯು 1999ರಲ್ಲಿ ಇಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕವನ್ನು ಆರಂಭಿಸಿತ್ತು. ಪ್ರಸಕ್ತ ವಿವಿಧ ರಾಷ್ಟ್ರಗಳಲ್ಲಿ ಸಂಸ್ಥೆಯು ಇಂಥ 16 ಘಟಕಗಳನ್ನು ಹೊಂದಿದೆ. ಅವೆಲ್ಲವುಗಳಲ್ಲಿ ಬೆಂಗಳೂರಿನ ಘಟಕ ಅತಿ ದೊಡ್ಡದಾಗಿದೆ. ಗಮನಾರ್ಹ ಅಂಶಗಳು l ಪರೀಕ್ಷೆಗೆ ಅನುಮತಿ ಸಿಕ್ಕ ಮಾತ್ರಕ್ಕೆ, ಹುವಾವೆ ಉಪಕರಣಗಳ ವಾಣಿಜ್ಯ ಮಾರಾಟಕ್ಕೆ ಅನುಮೋದನೆ ಸಿಕ್ಕಿದೆ ಎಂದರ್ಥವಲ್ಲ l 2020ರ ಮೊದಲ ತ್ರೈ ಮಾಸಿಕದಲ್ಲಿ ಭಾರತದಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆ ಆರಂಭ ಸಾಧ್ಯತೆ l ಏರ್‌ಟೆಲ್ ಹಾಗೂ ವೊಡಾಫೋನ್ ಮೂಲಕ 4ಜಿ ನೆಟ್‌ವರ್ಕ್‌ಗಾಗಿ ಹುವಾವೆ ಕೆಲಸ ಮಾಡಿದೆ l ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಪ್ರಾಬಲ್ಯ ಸಾಧಿಸಿವೆ ನಿರ್ಬಂಧ ಎಲ್ಲೆಲ್ಲಿ? lಅಮೆರಿಕ lಆಸ್ಟ್ರೇಲಿಯಾ lನ್ಯೂಜಿಲೆಂಡ್ ಇನ್ನೂ ನಿರ್ಧಾರ ಇಲ್ಲ lಜರ್ಮನಿ lಕೆನಡಾ ಅನುಮತಿ ಎಲ್ಲೆಲ್ಲಿ? lಭಾರತ lಇಂಗ್ಲೆಂಡ್ lರಷ್ಯಾ lಫ್ರಾನ್ಸ್ lದಕ್ಷಿಣ ಕೊರಿಯಾ