Loading..!

Back
ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಂತಿಮ ಹಂತದ ತಯಾರಿ ಹೇಗಿರಬೇಕು..? ನಿಮಗಾಗಿ ಕೆಲ ಸಲಹೆಗಳು

| Published on: 25 ಡಿಸೆಂಬರ್ 2019

Image not found

ಭಾರತೀಯ ಪೊಲೀಸ್‌ ವ್ಯವಸ್ಥೆಯಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಯೆಂದರೆ ಪ್ರಾಥಮಿಕ ಹುದ್ದೆ ಎಂದು ಹೇಳಬಹುದು. ಠಾಣಾ ಅಧಿಕಾರಿಯಾಗಿ ಹೆಚ್ಚಿನ ಹೊಣೆಗಾರಿಕೆಯ ಹುದ್ದೆಯಿದು. ಇದರಲ್ಲಿ ಕ್ರಮೇಣ ಬಡ್ತಿ ಪಡೆಯುತ್ತ ಡಿವೈಎಸ್‌ಪಿ, ಎಸ್‌ಪಿಯಿಂದ ಕೆಲವು ಅಪರೂಪದ ಪ್ರಕರಣಗಳಲ್ಲಿ ಐಪಿಎಸ್‌ ಅಧಿಕಾರಿಗೆ ಸಮನಾದ ಹುದ್ದೆಗೂ ಏರಬಹುದು. ಸದ್ಯಕ್ಕಂತೂ ಪದವಿ ಮುಗಿಸಿದ, ಉತ್ತಮ ದೇಹದಾರ್ಢ್ಯವಿರುವ ಯುವಕ/ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಹುದ್ದೆಯ ಬಗ್ಗೆ ಆಸಕ್ತಿ ತಳೆದಿದ್ದು, ಇದಕ್ಕಾಗೇ ಇರುವ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಇತ್ತೀಚಿನ ಬೆಳವಣಿಗೆ.

ಈಗಾಗಲೇ ಕರ್ನಾಟಕದಲ್ಲಿ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದ್ದು, ಇನ್ನೇನು ಜನವರಿ ಮೊದಲ ವಾರದಿಂದ ದೈಹಿಕ ಸಹಿಷ್ಣುತೆ ಹಾಗೂ ದೇಹದಾರ್ಢ್ಯ ಪರೀಕ್ಷೆಗಳು ನಡೆಯಲಿವೆ. ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಆಹ್ವಾನ ನೀಡಲಾಗುತ್ತದೆ. ಹೌದು, ಇದು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಲ್ಲ. ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದ್ದು, ನಂತರ ಲಿಖಿತ ಪರೀಕ್ಷೆ ನಡೆಯಲಿದೆ.

ಸಹಿಷ್ಣುತೆ ಪರೀಕ್ಷೆ (ಎಂಡ್ಯುರೆನ್ಸ್‌ ಟೆಸ್ಟ್‌–ET) ಮತ್ತು ದೇಹದಾರ್ಢ್ಯ ಪರೀಕ್ಷೆ (ಫಿಸಿಕಲ್‌ ಸ್ಟ್ಯಾಂಡರ್ಡ್‌ ಟೆಸ್ಟ್‌– PST) : ಅಭ್ಯರ್ಥಿಗಳು ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗುವಾಗ, ಕರೆಪತ್ರದ ಜೊತೆಗೆ ಈ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ. ಅವುಗಳೆಂದರೆ ಚಾಲನಾ ಪರವಾನಗಿ ಪತ್ರ ಅಥವಾ ಪ್ಯಾನ್ ಕಾರ್ಡ್, ಸಾರ್ವಜನಿಕ ಬ್ಯಾಂಕ್‌ಗಳು / ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ ಅಥವಾ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿತರಿಸಿರುವ ಪಿಂಚಣಿ ಪುಸ್ತಕ / ಪಿಂಚಣಿ ಮಂಜೂರಾತಿ ಆಗಿರುವ ಆದೇಶ ಅಥವಾ ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್. ಅಭ್ಯರ್ಥಿಗಳು 1600 ಮೀಟರ್ ಓಟವನ್ನು 7 ನಿಮಿಷದ ಒಳಗಾಗಿ ಹಾಗೂ ಮಹಿಳಾ, ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 400 ಮೀಟರ್ ಓಟವನ್ನು ಎರಡು ನಿಮಿಷದೊಳಗಾಗಿ ಪೂರ್ಣಗೊಳಿಸಬೇಕು. ನಂತರ ಮುಂದಿನ ಹಂತವಾದ ಸಹಿಷ್ಣುತೆ ಪರೀಕ್ಷೆಯಲ್ಲಿ ಎತ್ತರ ಜಿಗಿತ ಅಥವಾ ಉದ್ದ ಜಿಗಿತ ಹಾಗೂ ಗುಂಡೆಸೆತದಲ್ಲಿ ಮೂರು ಅವಕಾಶಗಳನ್ನು ನೀಡಲಾಗುತ್ತದೆ. ಮೂರು ಅವಕಾಶಗಳಲ್ಲಿ ಉತ್ತಮವಾದ ಒಂದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಹಾಲ್‌ಟಿಕೆಟ್‌ ಅನ್ನು ಅಪ್‌ಲೋಡ್‌ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆಯು ಪದವಿ ಮಟ್ಟದಲ್ಲಿದ್ದು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಲಿಖಿತ ಪರೀಕ್ಷೆ : ಪ್ರಶ್ನೆಪತ್ರಿಕೆ-1: ಇದು ಡಿಸ್ಕ್ರಿಪ್ಟಿವ್‌ ರೀತಿಯಲ್ಲಿರುತ್ತದೆ. ಅಂದರೆ ಉತ್ತರಗಳನ್ನು ವಿಸ್ತಾರವಾಗಿ ಬರೆಯಬೇಕಾಗುತ್ತದೆ. ಈ ಪತ್ರಿಕೆಯು ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಒಂದನೇ ಭಾಗವು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆಯುವುದು. ಇದಕ್ಕೆ 20 ಅಂಕಗಳು. ಎರಡನೇ ಭಾಗವು ವಾಕ್ಯಗಳನ್ನು ಕನ್ನಡ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಹಾಗೂ ಇಂಗ್ಲಿಷ್ ಭಾಷೆಯಿಂದ ಕನ್ನಡ ಭಾಷೆಗೆ ಭಾಷಾಂತರಿಸುವುದು, ಇದಕ್ಕೆ 20 ಅಂಕಗಳು ಹಾಗೂ ಸಾರಾಂಶ ಲೇಖನಕ್ಕೆ 10 ಅಂಕಗಳನ್ನು ನಿಗದಿ ಮಾಡಲಾಗಿದೆ. ಹೀಗೆ ಒಟ್ಟು 50 ಅಂಕಗಳನ್ನು ಹೊಂದಿರುತ್ತದೆ. ಇದರಲ್ಲಿ ಕನಿಷ್ಠ ಅಂಕಗಳ ಮಿತಿ ಇರುವುದಿಲ್ಲ.

ಭಾಷಾಂತರ : ಈ ಪ್ರಶ್ನೆ ಪತ್ರಿಕೆಯಲ್ಲಿ ಬರುವ ಭಾಷಾಂತರವು ಕಡ್ಡಾಯವಾಗಿದ್ದು ನೀವು ಉತ್ತರಿಸಲೇಬೇಕಾದ ಭಾಗವಿದು. ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೆ ಎರಡು ತರಹದ ಭಾಷಾಂತರಗಳಿವೆ. ಒಟ್ಟು 20 ಅಂಕಗಳಿಗಾಗಿ ಭಾಷಾಂತರವನ್ನು ಪರೀಕ್ಷೆಯಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಓದಿರುವ ಅಭ್ಯರ್ಥಿಗಳು ಈ ಪತ್ರಿಕೆಯನ್ನು ನೋಡಿ ಹೆದರಿಕೊಳ್ಳುವುದು ಸಾಮಾನ್ಯ. ‘ಇಂಗ್ಲಿಷ್ ಮಾಧ್ಯಮದವರೊಂದಿಗೆ ಪೈಪೋಟಿ ಮಾಡೋದು ಹೇಗೆ?’ ಎಂಬ ಭಯ ವ್ಯಕ್ತಪಡಿಸುತ್ತಾರೆ, ಆದರೆ ಕನ್ನಡ ಮಾಧ್ಯಮದವರಿಗೆ ಇಂಗ್ಲಿಷ್ ಅನುವಾದ ಕಷ್ಟವಾದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಬೆಳೆದ ಅಭ್ಯರ್ಥಿಗಳಿಗೆ ಕನ್ನಡಕ್ಕೆ ಭಾಷಾಂತರಿಸುವುದು ಅಷ್ಟೇ ಕಷ್ಟದ ಕೆಲಸ. ಆದ್ದರಿಂದ ಹೆದರದೇ ಸಿದ್ಧರಾಗಿ. ಖಂಡಿತ ಯಶಸ್ಸು ಸಿಗುವುದು.

ಪ್ರಶ್ನೆಪತ್ರಿಕೆ-2 ಈ ಪ್ರಶ್ನೆಪತ್ರಿಕೆಯು ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಸಾಮಾನ್ಯ ಜ್ಞಾನವು ಪ್ರಚಲಿತ ವಿದ್ಯಮಾನ, ವಿಜ್ಞಾನ, ಭೂಗೋಳ, ಕಲೆ, ಸಾಹಿತ್ಯ, ನೈತಿಕ ಶಿಕ್ಷಣ, ಆಧುನಿಕ ಭಾರತೀಯ ಇತಿಹಾಸ, ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿ ಮತ್ತು ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾತ್ಮಕ ತತ್ವಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಮಾನಸಿಕ ಸಾಮರ್ಥ್ಯ (ಮೆಂಟಲ್‌ ಎಬಿಲಿಟಿ)ವು ಗಣನಾ ಕೌಶಲ, ಪ್ರಾದೇಶಿಕ ಮನ್ನಣೆ ಕೌಶಲ, ಗ್ರಹಿಕೆ, ತೀರ್ಮಾನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಸಹ ಒಳಗೊಂಡಿರುತ್ತದೆ. ಇದು ಬಹುವಿಧ ಆಯ್ಕೆಯ ( ಮಲ್ಟಿಪಲ್‌ ಚಾಯ್ಸ್‌) ವಸ್ತುನಿಷ್ಠ (ಆಬ್ಜೆಕ್ಟಿವ್‌) ಮಾದರಿಯದಾಗಿದ್ದು, ಒಟ್ಟು 150 ಅಂಕಗಳ ಒಂದೂವರೆ ಗಂಟೆಯ ಪರೀಕ್ಷೆಯಾಗಿರುತ್ತದೆ.

ಪರೀಕ್ಷಾ ತಯಾರಿ ಹೇಗೆ? l ಇದೊಂದು ಸ್ಪರ್ಧೆಯನ್ನು ನೀಡುವ ಸಲುವಾಗಿಯೇ ಇರುವ ಪರೀಕ್ಷೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ನಿಮ್ಮ ತಯಾರಿ ಆರಂಭಿಸಿ. ಎಲ್ಲಾ ಪರೀಕ್ಷೆಗಳಿಗೂ 8, 9 ಮತ್ತು 10ನೇ ತರಗತಿಯ ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಪುಸ್ತಕಗಳನ್ನು ಓದಲೇಬೇಕು. ಪ್ರತಿ ದಿನವೂ ದಿನ ಪತ್ರಿಕೆಗಳನ್ನು ಓದಲು ಮರೆಯಬೇಡಿ. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲೇಬೇಕು. ಮೆಂಟಲ್ ಎಬಿಲಿಟಿಗೆ ಗಮನ ನೀಡಿ ನಿತ್ಯ ಬಿಡಿಸುತ್ತಾ ಮುನ್ನಡೆಯಿರಿ. ಪಿಯುಸಿಯ ತರಗತಿಗಾಗಿ ಇರುವ ಇತಿಹಾಸ, ಭಾರತೀಯ ಅರ್ಥವ್ಯವಸ್ಥೆ, ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. l ಇಲ್ಲಿ ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯುವ ಪ್ರಶ್ನೆಗಳು ಇರುವುದಿಲ್ಲ. ಆದ್ದರಿಂದ ಪ್ರತಿ ವಿಷಯವನ್ನು ಓದುವಾಗಲೂ ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಅಪ್ಲಿಕೇಬಲ್ ಮೈಂಡ್‌ಸೆಟ್ ಇಟ್ಟುಕೊಂಡು ವಿಷಯಗಳನ್ನು ಓದಿ. ಕಂಠಪಾಠಕ್ಕಿಂತ ವಿಷಯದ ತಿಳಿವಳಿಕೆ ಮುಖ್ಯ. l ಒಂದು ನೂರು ಪ್ರಶ್ನೆಗಳಿಗೆ ಒಂದೂವರೆ ಗಂಟೆಯಲ್ಲಿ ಉತ್ತರಿಸಬೇಕಾಗುತ್ತದೆ. ಅದಕ್ಕಾಗಿ ಸಮಯದ ಹೊಂದಾಣಿಕೆ ಮುಖ್ಯ. ಹೀಗಾಗಿ ನಿತ್ಯ ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸುವ ಮೂಲಕ ಅಭ್ಯಾಸ ಮಾಡುತ್ತಿರಿ. l ಪ್ರತಿ ದಿನ ಕನಿಷ್ಠ 5–6 ಗಂಟೆಯನ್ನಾದರೂ ಓದಲು ಮೀಸಲಿಡಿ. ಅದರಲ್ಲಿ ಒಂದು ತಾಸು ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಮೀಸಲಿಟ್ಟರೆ ಒಳಿತು. l ಪ್ರತಿನಿತ್ಯವೂ ನೀವು ಹಿಂದೆ ಓದಿದ ವಿಷಯವನ್ನು ಪುನರಾವರ್ತನೆ ಮಾಡುತ್ತಾ ಅಧ್ಯಯನ ಮಾಡುವುದರಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯ. l ಇದೊಂದು ಸ್ಪರ್ಧಾತ್ಮಕ ಪರೀಕ್ಷೆಯಾದ್ದರಿಂದ ಸ್ಪರ್ಧೆಯೇ ಪ್ರಧಾನವಾಗಿರುತ್ತದೆ ಮತ್ತು ಆ ಸ್ಪರ್ಧೆಯಲ್ಲಿ ಮುಂದೆ ಇರಬೇಕಾದ ಅಗತ್ಯ ಇರುವುದರಿಂದ ತರಬೇತಿ ಕೇಂದ್ರಗಳ ಸಹಾಯವನ್ನು ಪಡೆಯಬಹುದು.

ಓದಬೇಕಾದ ಕೆಲವು ಪುಸ್ತಕಗಳು : l ಭಾರತೀಯ ಸಂವಿಧಾನ– ಕೆ.ಎಂ.ಸುರೇಶ್‌ ಅಥವಾ ಗಂಗಾಧರ್‌ l ಇಂಡಿಯನ್‌ ಹಿಸ್ಟರಿ ಅಂಡ್‌ ಕರ್ನಾಟಕ ಹಿಸ್ಟರಿ– ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಅಥವಾ ಕೆ.ಸದಾಶಿವ ಬರೆದಿರುವ ಪುಸ್ತಕ l ಭೂಗೋಳ– ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ l ಮೆಂಟಲ್‌ ಎಬಿಲಿಟಿ– ಪಿಎಸ್‌ಐ, ರೈಲ್ವೆ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆ. ಆರ್.ಎಸ್. ಅಗರವಾಲ್ ಅವರು ಬರೆದಿರುವ ‘ವರ್ಬಲ್ ಆಂಡ್ ನಾನ್‌ವರ್ಬಲ್ ರೀಸನಿಂಗ್’. l ವಿಜ್ಞಾನ– 8, 9 ಮತ್ತು 10ನೇ ತರಗತಿ ಪಠ್ಯ l ಅರ್ಥಶಾಸ್ತ್ರ– ಪ್ರಥಮ ಮತ್ತು ದ್ವಿತೀಯ ಪಿಯುಸಿ ಎಕನಾಮಿಕ್ಸ್‌ ಪಠ್ಯ ಪುಸ್ತಕ l ಪ್ರಚಲಿತ ವಿದ್ಯಮಾನ– ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆ ಭಾಷಾಂತರಕ್ಕೆ ಮುನ್ನ...: l ಶಬ್ದಶಃ ಅನುವಾದಿಸಲು ಹೋಗಬೇಡಿ. ಭಾವಾರ್ಥಗಳ ಭಾಷಾಂತರ ಮುಖ್ಯ. l ಒಟ್ಟಾರೆ ಭಾಷಾಂತರ ಮುಖ್ಯವೇ ಹೊರತು, ಭಾಗಶಃ ಅಲ್ಲ. ಅಂದರೆ ನೀಡಲಾದ ವಾಕ್ಯವು ಏನನ್ನು ಹೇಳಲು ಹೊರಟಿದೆಯೋ ಅದನ್ನು ತಿಳಿಸಿದರೆ ಉತ್ತಮ. l ನೀವು ಕನ್ನಡ ಮಾಧ್ಯಮದವರಾದರೆ ಇಂಗ್ಲಿಷ್‌ನಲ್ಲಿ ಇರುವುದನ್ನು ಮೊದಲು ಕನ್ನಡಕ್ಕೆ ಅನುವಾದಿಸಿ, ನಿಮಗೆ ಧೈರ್ಯ ಬರುವುದು. ನಂತರ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಲು ಪ್ರಯತ್ನಿಸಿ. l ಅನುವಾದವನ್ನು ಬರೆಯುವ ಮುನ್ನ ನೀಡಿರುವ ಇಡೀ ವಾಕ್ಯವನ್ನು ಓದಿ, ಮನಸ್ಸಿನಲ್ಲಿ ಅನುವಾದ ಮಾಡಿಮುಗಿಸಿ. ಬೇಕು ಅನಿಸಿದರೆ ಅದನ್ನು ಪ್ರಶ್ನೆಪತ್ರಿಕೆಯಲ್ಲಿ ನೀಡಿರುವ ಕಚ್ಛಾ ಕೆಲಸ ಮಾಡಲು ಇಟ್ಟಿರುವ ಜಾಗದಲ್ಲಿ ಬರೆದು ಅಭ್ಯಾಸವನ್ನು ಕೂಡಾ ಮಾಡಬಹುದು. l ಪರೀಕ್ಷೆಗೆ ಮುನ್ನವೇ ಸಾಕಷ್ಟು ದಿನಗಳ ಮೊದಲೇ ಮನೆಯಲ್ಲೇ ಭಾಷಾಂತರವನ್ನು ಅಭ್ಯಾಸ ಮಾಡಿ, ಅದಕ್ಕೆ ಬೇಕಾದಷ್ಟು ವ್ಯಾಕರಣವನ್ನು ಸಹಾ ಅಭ್ಯಾಸ ಮಾಡಿಕೊಳುವುದು ಉತ್ತಮ. l ಆರಂಭದಲ್ಲಿ ಇಡಿ ಪ್ಯಾರಾ ಅನುವಾದಿಸಲು ಹೋಗುವ ಬದಲು, ಒಂದೊಂದೇ ಬಿಡಿಬಿಡಿಯಾದ ವಾಕ್ಯಗಳನ್ನು ಅನುವಾದಿಸಿ. ಅದು ಅಭ್ಯಾಸವಾದ ಬಳಿಕ ಆಂಗ್ಲ ಭಾಷಾ ಪ್ಯಾರಾವನ್ನು ಕನ್ನಡಕ್ಕೂ ಕನ್ನಡ ಭಾಷಾ ಪ್ಯಾರಾವನ್ನು ಇಂಗ್ಲಿಷ್ ಭಾಷೆಗೂ ಅನುವಾದಿಸಲು ಪ್ರಯತ್ನಿಸಿ.

References: ಪಿಎಸ್‌ಐ ಪರೀಕ್ಷೆ: ಸಾಮಾನ್ಯ ಜ್ಞಾನಕ್ಕೆ ಆದ್ಯತೆ :
Prajavani news paper (25-12-2019)
Author : ಕೆ.ಎಚ್. ಮಂಜುನಾಥ್
KSP PSI Exam Preparation Tips, PSI Books to Read