ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ (ಫೆ.10) ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪದವಿ ಪೂರೈಸಿ, ಹೊರ ಬರುತ್ತಿದ್ದರೂ ಸರ್ಕಾರವು ನೇಮಕಾತಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉದ್ಯೋಗ ಆಕಾಂಕ್ಷಿಗಳು ಅಕ್ರೋಶ ಹೊರಹಾಕಿದ್ದಾರೆ.
80 ಸಾವಿರ ಶಿಕ್ಷಕರ ನೇಮಕಾತಿ ಯನ್ನು ತಕ್ಷಣವೇ ಆರಂಭಿಸಬೇಕು. ಎಲ್ಲ ವರ್ಗದ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು. ವರ್ಷಕ್ಕೆ ಎರಡು ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಬಿ.ಕಾಂ ಹಾಗೂ ಪದವೀಧರರಿಗೂ ಸಿಇಟಿ ಬರೆಯಲು ಅವಕಾಶ ಕಲ್ಪಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ತಕ್ಷಣವೇ ನೇಮಿಸಬೇಕು. ಸಂಗೀತ ಹಾಗೂ ಚಿತ್ರಕಲಾ ವಿಭಾಗಕ್ಕೂ ಶಿಕ್ಷಕರನ್ನು ನೇಮಿಸಬೇಕು. 2022ರ ಶಿಕ್ಷಕರ ನೇಮಕಾತಿಯ ಹೆಚ್ಚುವರಿ ಈ ಆಯ್ಕೆ ಪಟ್ಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಎಎಪಿ ರಾಜ್ಯ ಘಟಕದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಭೇಟಿ ನೀಡಿ ಪ್ರತಿಭಟನಕಾರರ ಅಹವಾಲು ಆಲಿಸಿದರು.
Comments